ಬೆಂಗಳೂರು: ಸುಮಾರು ಆರು ತಿಂಗಳ ಹಿಂದೆಯೇ ಶ್ರೀಮುರಳಿ ಅಭಿನಯದ ಹೊಸ ಚಿತ್ರ ‘ಬಘೀರಾ’ದ ಮುಹೂರ್ತವಾಗಿ ಚಿತ್ರೀಕರಣ ಸಹ ಪ್ರಾರಂಭವಾಗಿತ್ತು. ಆದರೆ, ಚಿತ್ರ ನಿರ್ಮಿಸುತ್ತಿರುವ ಹೊಂಬಾಳೆ ಫಿಲಂಸ್ ಮಾತ್ರ ನಾಯಕಿ ಯಾರೆಂಬ ವಿಷಯವನ್ನು ಬಿಟ್ಟುಕೊಟ್ಟಿರಲಿಲ್ಲ. ಈಗ ಆ ರಹಸ್ಯ ಕೊನೆಗೂ ಬಯಲಾಗಿದ್ದು, ಚಿತ್ರತಂಡಕ್ಕೆ ರುಕ್ಮಿಣಿ ವಸಂತ್ ನಾಯಕಿಯಾಗಿ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ: ‘ಜಸ್ಟ್ ಪಾಸ್’ ಆಗಲು ಹೊರಟ ಶ್ರೀಗೆ ನಾಯಕಿ ಸಿಕ್ಕಳು …
ಆರ್ ಜೆ ಶ್ರೀನಿ ನಿರ್ದೇಶನ ಮತ್ತು ಅಭಿನಯದ 'ಬೀರ್ಬಲ್' ಚಿತ್ರದ ಮೂಲಕ ಎಂಟ್ರಿ ಕೊಟ್ಟ ರುಕ್ಮಿಣಿ, ಆ ನಂತರ ರಕ್ಷಿತ್ ಶೆಟ್ಟಿ ಎದುರು ನಾಯಕಿಯಾಗಿ 'ಸಪ್ತ ಸಾಗರದಾಚೆ ಎಲ್ಲೋ' ಮತ್ತು ಗಣೇಶ್ ಅಭಿನಯದ 'ಬಾನದಾರಿಯಲ್ಲಿ' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ‘ಬಘೀರಾ’ ಅವರ ನಾಲ್ಕನೆಯ ಚಿತ್ರವಾಗಿದೆ.
ಮೇ ತಿಂಗಳಲ್ಲಿ ಪ್ರಾರಂಭವಾದ ‘ಬಘೀರಾ’ ಚಿತ್ರದ ಚಿತ್ರೀಕರಣ ಗೋವಾ, ಮಂಗಳೂರು ಮುಂತಾದ ಕಡೆ ನಡೆಯುತ್ತಿದೆ. ಚಿತ್ರ ಅರ್ಧದಷ್ಟು ಮುಗಿದಿದ್ದು, ಮುಂದಿನ ವರ್ಷ ಬಿಡುಗಡೆಯಾಗಲಿದೆ. ಶ್ರೀಮುರಳಿ ಮತ್ತು ರುಕ್ಮಿಣಿ ಜತೆಗೆ, ರಂಗಾಯಣ ರಘು ಮತ್ತು ಅಚ್ಯುತ್ ಕುಮಾರ್ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಎ ಜೆ ಶೆಟ್ಟಿ ಅವರ ಛಾಯಾಗ್ರಹಣವಿದೆ.
ಇದನ್ನೂ ಓದಿ: PHOTO Gallery | ಮಾಡೆಲ್ ಅವಿವಾ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡ ಅಭಿಷೇಕ್ ಅಂಬರೀಷ್; ಇಲ್ಲಿವೆ ನೋಡಿ ಎಂಗೇಜ್ಮೆಂಟ್ ಫೋಟೋಗಳು
‘ಬಘೀರಾ’ ಚಿತ್ರವನ್ನು ಡಾ ಸೂರಿ ನಿರ್ದೇಶಿಸುತ್ತಿದ್ದು, ಇದು ನಿರ್ದೇಶಕರಾಗಿ ಅವರ ಎರಡನೇ ಚಿತ್ರ. ಈ ಹಿಂದೆ ಯಶ್ ಅಭಿನಯದ ‘ಲಕ್ಕಿ’ ಚಿತ್ರವನ್ನು ಡಾ ಸೂರಿ ನಿರ್ದೇಶಿಸಿದ್ದರು. ಈಗ ಪ್ರಶಾಂತ್ ನೀಲ್ ಬರೆದ ಒಂದು ಕಥೆಯನ್ನು ಆಧರಿಸಿ, ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ.