ಹಲವು ಕಾರಣಗಳಿಂದ ಸದಾ ಸುದ್ದಿಯಲ್ಲಿರುವ ಕನ್ನಡದ ಮಾಸ್ಟರ್ಪೀಸ್ ಸಿನಿಮಾ ‘ಕೆಜಿಎಫ್- ಚಾಪ್ಟರ್ 2‘ ಇದೀಗ ಮತ್ತೊಂದು ವಿಚಾರಕ್ಕೆ ಸದ್ದು ಮಾಡುತ್ತಿದೆ. ಚಾಪ್ಟರ್ 1ಕ್ಕೆ ಸಿಕ್ಕ ಭರ್ಜರಿ ಪ್ರತಿಕ್ರಿಯೆಯಿಂದ, ಚಾಪ್ಟರ್ 2ರ ಬಗ್ಗೆ ಪ್ರೇಕ್ಷಕರೂ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇತ್ತ ‘ಕೆಜಿಎಫ್ ಚಾಪ್ಟರ್ 2‘ ಸೆಟಲೈಟ್ ಹಕ್ಕಿಗೂ ಭಾರೀ ಡಿಮಾಂಡ್ ಕ್ರಿಯೆಟ್ ಆಗಿದೆ. ಬರೋಬ್ಬರಿ 120 ಕೋಟಿ ಮೊತ್ತಕ್ಕೆ ಕೆಜಿಎಫ್ ಸಿನಿಮಾ ಸೇಲ್ ಆಗಿದೆ ಎನ್ನಲಾಗುತ್ತಿದೆ!!
ಇದನ್ನೂ ಓದಿ: ಇಂದು ಈ ಟಾಲಿವುಡ್ ನಟನ ನಿಶ್ಚಿತಾರ್ಥ; ಮದುವೆ ಯಾವಾಗ?
‘ಕೆಜಿಎಫ್’ ಸಿನಿಮಾ ಕನ್ನಡದ ಜತೆಗೆ ಬಾಲಿವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ನಲ್ಲೂ ಹವಾ ಸೃಷ್ಟಿಸಿತ್ತು. ರಾಕಿಂಗ್ ಸ್ಟಾರ್ ಯಶ್ಗೆ ನ್ಯಾಶನಲ್ ಸ್ಟಾರ್ ಪಟ್ಟ ತಂದು ಕೊಟ್ಟಿತ್ತು, ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ. ಹಾಗಾಗಿ ಈ ಚಿತ್ರದ ಬಗ್ಗೆ ಸಣ್ಣ ಮಾಹಿತಿ ಹೊರಬಿದ್ದರೂ, ಅದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುವುದು ಸಹಜ. ಅದೇ ರೀತಿ ಇದೀಗ ಚಿತ್ರದ ಸೆಟಲೈಟ್ ಹಕ್ಕುಗಳ ಮಾರಾಟವೂ ಭರ್ಜರಿಯಾಗಿ ಬಿಕರಿಯಾಗಿದೆಯಂತೆ. ಸದ್ಯಕ್ಕೆ ಯಾವ ಮನರಂಜನಾ ವಾಹಿನಿ ಹಕ್ಕುಗಳನ್ನು ಖರೀದಿಸಿದೆ? ಯಾವ ಭಾಷೆಯಲ್ಲಿ ಟಿವಿ ಹಕ್ಕುಗಳು ಮಾರಾಟವಾಗಿವೆ? ಈ ಎಲ್ಲವೂ ಸದ್ಯಕ್ಕೆ ಬಹಿರಂಗವಾಗಿಲ್ಲ. ಒಟ್ಟಾರೆಯಾಗಿ 120 ಕೋಟಿಗೆ ಸೇಲ್ ಎಂಬುದಷ್ಟೇ ಸದ್ಯದ ಸುದ್ದಿ. ಇದು ನಿಜವಾ ಸುಳ್ಳಾ ಎಂಬುದನ್ನು ಚಿತ್ರತಂಡವೇ ಅಧಿಕೃತವಾಗಿ ಹೇಳಬೇಕಿದೆ!
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಹಾಡುಗಳ ಕೆಲಸಕ್ಕೆ ಚಾಲನೆ ನೀಡಿರುವ ಚಿತ್ರತಂಡ, ಪೋಸ್ಟ್ ಪ್ರೊಡಕ್ಷನ್ನತ್ತ ದೃಷ್ಟಿ ನೆಟ್ಟಿದೆ. ಶೂಟಿಂಗ್ಗೆ ಅನುಮತಿ ಸಿಗುತ್ತಿದ್ದಂತೆ ಒಂದಷ್ಟು ಪ್ಯಾಚ್ವರ್ಕ್ ಚಿತ್ರೀಕರಣವನ್ನು ಮಾಡಿಕೊಳ್ಳಲು ಸಜ್ಜಾಗಲಿದೆ. ಈ ಮೊದಲೇ ಹೇಳಿದಂತೆ ಅಕ್ಟೋಬರ್ 23ರಂದೇ ಚಿತ್ರ ಬಿಡುಗಡೆ ಆಗುವುದು ಖಚಿತ ಎಂದು ಚಿತ್ರತಂಡವೂ ತಿಳಿಸಿದೆ.