ಸಿನಿವಾಣಿ

ಮತ್ತೆ 'ರೋಲೆಕ್ಸ್​' ಆಗ್ತಾರಾ ಸೂರ್ಯ? ಏನಂತಾರೆ ನಿರ್ದೇಶಕ ಲೋಕೇಶ್​ ಕನಕರಾಜ್​

chetannadiger

ಚೆನ್ನೈ: ತಮಿಳು ಚಿತ್ರರಂಗವಷ್ಟೇ ಅಲ್ಲ, ಕಮಲ್​ ಹಾಸನ್​ ಅವರ ಕರಿಯರ್​ನಲ್ಲೂ ಸಾರ್ವಕಾಲಿಕ ಬ್ಲಾಕ್​ಬಸ್ಟರ್​ ಎಂಬ ಹೆಗ್ಗಳಿಕೆಗೆ ಪಾತ್ರವಾದ ಚಿತ್ರವೆಂದರೆ ಅದು 'ವಿಕ್ರಮ್​'. ಈ ಚಿತ್ರದ ಕೊನೆಯಲ್ಲಿ ಕಾಲಿವುಡ್​ನ ಸೂರ್ಯ, ರೊಲೆಕ್ಸ್​ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಪಾತ್ರ ಹಿಟ್​ ಆಗಿದ್ದಷ್ಟೇ ಅಲ್ಲ, ರೊಲೆಕ್ಸ್​ ಪಾತ್ರವನ್ನು ಇಟ್ಟುಕೊಂಡೇ ನಿರ್ದೇಶಕ ಲೋಕೇಶ್​ ಒಂದು ಸಿನಿಮಾ ನಿರ್ದೇಶಿಸುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಲೋಕೇಶ್ ಕನಕರಾಜ್​ ಮಾತ್ರ ಈ ಬಗ್ಗೆ ತುಟಿಕ್​ ಪಿಟಿಕ್​ ಎಂದಿರಲಿಲ್ಲ.

ಈಗ ಅವರು ಮೊದಲ ಬಾರಿಗೆ ಬಾಯಿ ಬಿಟ್ಟಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ, ಮೂರು ಚಿತ್ರಗಳನ್ನು ಮುಗಿಸಿ, ಆ ನಂತರ 'ರೊಲೆಕ್ಸ್​' ಚಿತ್ರವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಎಂದು ಹೇಳಿದ್ದಾರೆ. ಇದಕ್ಕೆಲ್ಲ ಮೂರು ವರ್ಷಗಳಾದರೂ ಬೇಕು.

ಈ ಕುರಿತು ಮಾತನಾಡಿರುವ ಲೋಕೇಶ್​, 'ಸದ್ಯ ವಿಜಯ್​ ಅಭಿನಯದ ಚಿತ್ರ ನಿರ್ದೇಶಿಸುತ್ತಿದ್ದೇನೆ. ಆ ನಂತರ ಕಮಲ್​ ಹಾಸನ್​ ಅವರ ಡೇಟ್ಸ್​ ಸಿಕ್ಕರೆ 'ವಿಕ್ರಮ್​ 2' ಮಾಡುತ್ತೇನೆ. 'ಕೈದಿ 2' ಮಾಡುವ ಯೋಚನೆಯೂ ಇದೆ. ಇದೆಲ್ಲದರ ನಂತರ 'ರೊಲೆಕ್ಸ್​ ಮಾಡಬಹುದು. ಇದೊಂದು ಯೂನಿವರ್ಸ್​ ಇದ್ದಂತೆ. ಯಾರ ಜತೆಗೆ ಬೇಕಾದರೂ ಚಿತ್ರ ಮಾಡಬಹುದು. ಮುಂದುವರೆದ ಭಾಗವೋ, ಹಿಂದಿನ ಭಾಗವೋ ಮಾಡಬಹುದು. ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಒಟ್ಟಿನಲ್ಲಿ ಮುಂದಿನ 10 ವರ್ಷ ನಾನು ಬ್ಯುಸಿ' ಎಂದು ಹೇಳಿದ್ದಾರೆ.

ಇನ್ನು, ಕಮಲ್​ ಹಾಸನ್​ ಸಹ 'ರೊಲೆಕ್ಸ್​' ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. 'ಆ ಬಗ್ಗೆ ಜನರಿಗೆ ಪ್ರಾಮಿಸ್​ ಮಾಡಿದ್ದೇವೆ. ಅದನ್ನು ಉಳಿಸಿಕೊಳ್ಳುವ ಕರ್ತವ್ಯ ನಮ್ಮದು' ಎಂದು ಹೇಳುವ ಮೂಲಕ ಮುಂದೊಂದು ದಿನ ಚಿತ್ರ ಆಗಲಿದೆ ಎಂದು ಹೇಳಿದ್ದಾರೆ.