ಸಿನಿವಾಣಿ

ಕೊಂಚ ಜಾಗರೂಕತೆಯಿಂದಲೇ ‘ರಾಬರ್ಟ್​’ ಬೆಡಗಿಯ ಸಿಂಗಿಂಗ್​ ಟ್ಯಾಲೆಂಟ್ ನೋಡಿ..

manjunathktgns

ಬೆಂಗಳೂರು: ಲಾಕ್​ಡೌನ್​ ಹಿನ್ನೆಲೆಯಲ್ಲಿ ಬಹುತೇಕರು ಒಂದಲ್ಲ ಒಂದು ಚಟುವಟಿಕೆಯಲ್ಲಿ ತಲ್ಲೀನರಾಗಿದ್ದಾರೆ. ಅದರಲ್ಲೂ ಸಿನಿಮಾ ಮಂದಿಯಂತೂ ತುಸು ಜಾಸ್ತಿನೇ ಮಗ್ನರಾಗಿದ್ದಾರೆ. ಫಿಟ್​ನೆಸ್​, ಆಹಾರ, ಓದು, ಸಿನಿಮಾ ಹೇಗೆ ಒಂದಿಲ್ಲೊಂದು ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಇದೀಗ ‘ರಾಬರ್ಟ್​’ ಬೆಡಗಿ ಆಶಾ ಭಟ್​, ತಮ್ಮೊಳಗಿನ ಕಲೆಯನ್ನು ಹೊರಹಾಕಿದ್ದಾರೆ. ಅದೂ ಹಾಡಿನ ಮೂಲಕ ಎಂಬುದಿಲ್ಲಿ ವಿಶೇಷ.

ಹೌದು, ಮಾಡೆಲಿಂಗ್​ ನಂಟಿನ ಜಾಡು ಹಿಡಿದು ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿರುವ ಆಶಾ ಭಟ್​, ಲಾಕ್​ಡೌನ್​ ಸಮಯವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹಾಡು, ನೃತ್ಯದಲ್ಲಿ ಬಿಜಿಯಾಗಿದ್ದಾರೆ. ಹೀಗಿರುವಾಗಲೇ ಮಂಗಳವಾರ ‘ಅಮೃತವರ್ಷಿಣಿ’ ಚಿತ್ರದ ತುಂತುರು ಅಲ್ಲಿ ನೀರ.. ಹಾಡಿಗೆ ಧ್ವನಿಯಾಗಿದ್ದಾರೆ. ಆ ವಿಡಿಯೋ ತುಣುಕನ್ನು ಟ್ವಿಟರ್​ನಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಬರೀ ಹಾಡನ್ನಷ್ಟೇ ಹಂಚಿಕೊಂಡಿಲ್ಲ. ಒಂದಿಷ್ಟು ಸಾಲುಗಳ ಕ್ಯಾಪ್ಷನ್​ ಸಹ ನೀಡಿದ್ದಾರೆ ಆಶಾ. ‘ಹಾಡು ಹೇಳುವುದರಿಂದ ನನಗೊಂದು ರೀತಿ ಖುಷಿ. ಕಂಫರ್ಟ್​ ಫೀಲ್​ ಆಗುತ್ತದೆ. ನನ್ನಿಷ್ಟದ ಹಾಡನ್ನು ಹಾಡಲು ಪ್ರಯತ್ನಿಸಿದ್ದೇನೆ. ನಿಮಗಿಷ್ಟವಾಗಬಹುದು. ಕೊನೆಗೆ ನಿಮ್ಮ ಜಾಗರೂಕತೆಯಲ್ಲಿಯೇ ಹಾಡು ಕೇಳಿ’ ಎಂದೂ ಹೇಳಿಕೊಂಡಿದ್ದಾರೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ, ಏ. 10ಕ್ಕೆ ಚಾಲೆಂಜಿಂಗ್​ ಸ್ಟಾರ್ ದರ್ಶನ್​ ನಟನೆಯ ‘ರಾಬರ್ಟ್​’ ಚಿತ್ರ ಬಿಡುಗಡೆ ಆಗಿರಬೇಕಿತ್ತು. ಕರೊನಾ ಹಿನ್ನೆಲೆಯಲ್ಲಿ ರಿಲೀಸ್​ ದಿನಾಂಕವನ್ನು ಮುಂದೂಡಲಾಗಿದೆ. ಚಿತ್ರದಲ್ಲಿ ದರ್ಶನ್​ಗೆ ಜೋಡಿಯಾಗಿ ಆಶಾ ಭಟ್ ನಟಿಸಿದ್ದು, ಸದ್ಯ ರಾಬರ್ಟ್​ ಗುಂಗಿನಲ್ಲಿಯೇ ಲಾಕ್​ಡೌನ್​ ದಿನಗಳನ್ನೂ ದೂಡುತ್ತಿದ್ದಾರೆ.