ಸಿನಿವಾಣಿ

ಅಭಿಮಾನದಲ್ಲಿ ಮಿಂದೆದ್ದ ಸುದೀಪ್

ಬೆಂಗಳೂರು: ಎರಡು ದಿನಗಳ ಮುಂಚೆಯೇ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾ ಮೂಲಕ ಹೇಳಿಬಿಟ್ಟಿದ್ದರು ಸುದೀಪ್. ಈ ಬಾರಿ ಕರೊನಾ ಹಾವಳಿ ಇರುವುದರಿಂದ ಮನೆ ಎದುರು ಜಮಾಯಿಸುವುದು ಬೇಡ, ತಮ್ಮ ಹುಟ್ಟುಹಬ್ಬಕ್ಕೆ ಇದ್ದಲ್ಲಿಂದಲೇ ಹರಸಿ- ಹಾರೈಸಿ ಎಂದಿದ್ದರು. ಅದರಂತೆ ಅಭಿಮಾನಿಗಳ ಅನುಪಸ್ಥಿತಿಯ ನಡುವೆಯೇ ಸುದೀಪ್ ತಮ್ಮ ಹುಟ್ಟುಹಬ್ಬವನ್ನು ಬಹಳ ಸರಳವಾಗಿ ಆಚರಿಸಿಕೊಂಡರು.

ಪ್ರತೀ ವರ್ಷ, ಸುದೀಪ್ ಹುಟ್ಟುಹಬ್ಬಕ್ಕೆ ಹಿಂದಿನ ರಾತ್ರಿಯಿಂದಲೇ ಅವರ ಮನೆ ಎದುರು ಅಭಿಮಾನಿಗಳು ಜಮಾಯಿಸುತ್ತಿದ್ದರು. ಈ ಬಾರಿ ಸಹ ಅಭಿಮಾನಿಗಳು ಮನೆ ಎದುರು ಬಂದು ಬ್ಯಾನರ್​ಗಳನ್ನು ಕಟ್ಟಿ, ಸಂಭ್ರಮಕ್ಕೆ ಅಣಿಯಾಗಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಬಂದು ಅವರನ್ನೆಲ್ಲಾ ಚದುರಿಸಿದರು. ಖುದ್ದಾಗಿ ಭೇಟಿಯಾಗಿ ಹಾರೈಸುವುದಕ್ಕೆ ಸಾಧ್ಯವಾಗದಿದ್ದರೂ, ಸೋಷಿಯಲ್ ಮೀಡಿಯಾ ಮೂಲಕ ಸಿನಿಮಾ ನಟ-ನಟಿಯರು ಸಾವಿರಾರು ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ಶಾಂತಿನಿವಾಸ ವೃದ್ಧಾಶ್ರಮಕ್ಕೆ ಗುದ್ದಲಿಪೂಜೆ: ಈಗಾಗಲೇ ಶಾಲೆಗಳನ್ನು ದತ್ತು ಪಡೆಯುವ ಕೆಲಸಗಳ ಜತೆಗೆ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕಿಚ್ಚ ಸುದೀಪ್, ವೃದ್ಧಾಶ್ರಮ ತೆರೆಯಲಿದ್ದಾರೆಂಬ ಸುದ್ದಿ ಈ ಹಿಂದೆಯೇ ಹರಿದಾಡಿತ್ತು. ಇದೀಗ ಜನ್ಮದಿನದ ಪ್ರಯುಕ್ತ ಸುದೀಪ್ ಪತ್ನಿ ಪ್ರಿಯಾ, ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ನಿಗದಿಪಡಿಸಿರುವ ಜಾಗದಲ್ಲಿ ವೃದ್ಧಾಶ್ರಮ ಕಟ್ಟಡ ನಿರ್ವಣಕ್ಕೆ ಬುಧವಾರ ಗುದ್ದಲಿಪೂಜೆ ನೆರವೇರಿಸಿದ್ದಾರೆ. ವಿಶೇಷ ಏನೆಂದರೆ ಈ ಹಿಂದೆ ಸುದೀಪ್ ತಾವೇ ನಟಿಸಿದ್ದ ಶಾಂತಿನಿವಾಸ ಚಿತ್ರದ ಶೀರ್ಷಿಕೆಯನ್ನೇ ಈ ವೃದ್ಧಾಶ್ರಮಕ್ಕೆ ಇಡಲಾಗಿದೆ.

‘ಕೋಟಿಗೊಬ್ಬ 3’ ಟೀಸರ್: ಈ ಬಾರಿ ಸುದೀಪ್ ಹುಟ್ಟುಹಬ್ಬಕ್ಕೆ ‘ಫ್ಯಾಂಟಮ್ ಮತ್ತು ‘ಕೋಟಿಗೊಬ್ಬ 3’ ಚಿತ್ರತಂಡಗಳಿಂದ ಏನಾದರೂ ವಿಶೇಷ ಗಿಫ್ಟ್ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಅದರಂತೆ, ‘ಕೋಟಿಗೊಬ್ಬ 3’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸಾಕಷ್ಟು ಮನರಂಜನಾತ್ಮಕ ಅಂಶಗಳಿರುವ ಈ ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಒಂದು ಮಿಲಿಯನ್ ಹಿಟ್ಸ್ ಪಡೆದಿದೆ. ಇನ್ನು ಎರಡೂ ಚಿತ್ರಗಳ ಟೀಸರ್ ಬಿಡುಗಡೆಯಾದರೆ ಕ್ಲಾಶ್ ಆಗುತ್ತದೆ ಎಂಬ ಕಾರಣಕ್ಕೆ, ‘ಫ್ಯಾಂಟಮ್ ಚಿತ್ರದ ಟೀಸರ್ ಬಿಡುಗಡೆ ಮಾಡಿಲ್ಲ ಎಂದು ನಿರ್ದೇಶಕ ಅನೂಪ್ ಭಂಡಾರಿ ಹೇಳಿದ್ದಾರೆ.

ಚಿತ್ರ ಘೋಷಿಸಿದ ಪ್ರೇಮ್

ನಿರ್ದೇಶಕ ‘ಜೋಗಿ’ ಪ್ರೇಮ್ ಸುದೀಪ್ ಅಭಿನಯದಲ್ಲಿ ಹೊಸ ಚಿತ್ರವೊಂದನ್ನು ಘೋಷಿಸಿದ್ದಾರೆ. ‘ನನ್ನ ಮುಂದಿನ ಚಿತ್ರ ಯಾವಾಗ ಮತ್ತು ಸುದೀಪ್ ಜತೆಗೆ ಮತ್ತೆ ಯಾವ ಚಿತ್ರ ಮಾಡುತ್ತೀರಾ ಎಂದು ಎಲ್ಲರೂ ಕೇಳುತ್ತಲೇ ಇದ್ದರು. ಸುದೀಪ್ ಜತೆಗೆ ಇನ್ನೊಂದು ಚಿತ್ರ ಮಾಡುತ್ತಿದ್ದು, ಇದುವರೆಗೂ ಕಾಣಿಸಿಕೊಳ್ಳದ ಒಂದು ವಿಭಿನ್ನ ಅವತಾರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ’ ಎಂದು ಪ್ರೇಮ್ ಘೋಷಿಸಿದ್ದಾರೆ.