ಸಿನಿವಾಣಿ

ಬಾಣಗಂಗಾದಲ್ಲಿ ರಿಷಿ ಕಪೂರ್ ಅಸ್ಥಿ ವಿಸರ್ಜನೆ

ಗುರುವಾರ ನಿಧನರಾದ ಬಾಲಿವುಡ್ ಖ್ಯಾತ ನಟ ರಿಷಿ ಕಪೂರ್ ಅವರ ಅಸ್ಥಿಯನ್ನು ಅವರ ಮಗ ರಣಬೀರ್ ಕಪೂರ್ ಭಾನುವಾರ ಮುಂಬೈನ ಬಾಣಗಂಗಾ ಘಾಟ್‌ನಲ್ಲಿ ವಿಸರ್ಜಿಸಿದ್ದಾರೆ.

ಭಾನುವಾರ ಮಲಬಾರ್ ಹಿಲ್‌ನಲ್ಲಿರುವ ವಲ್ಕೇಶ್ವರ ದೇವಸ್ಥಾನದ ಕಾಂಪ್ಲೆಕ್ಸ್‌ನಲ್ಲಿರುವ ಬಾಣಗಂಗಾ ಘಾಟ್‌ನಲ್ಲಿ ರಿಷಿ ಕಪೂರ್ ಅವರ ಅಸ್ಥಿ ವಿಸರ್ಜನೆ ಮಾಡಲಾಯಿತು. ರಿಷಿ ಕಪೂರ್ ಮಗ ರಣಬೀರ್ ಕಪೂರ್, ತಮ್ಮ ತಂದೆಯ ಅಸ್ತಿ ವಿಸರ್ಜಿಸಿದರು. ಅವರ ಜತೆಗೆ ರಿದ್ಧೀಮಾ ಕಪೂರ್, ಆಲಿಯಾ ಭಟ್, ನಿರ್ದೇಶಕ ಅಯಾನ್ ಮುಖರ್ಜಿ ಸೇರಿದಂತೆ ಹಲವರು ಹಾಜರಿದ್ದರು.

ಬಾಣಗಂಗಾ ಘಾಟ್‌ಗೆ ಪುರಾಣದ ನಂಟಿದೆ. ತ್ರೇತಾಯುಗದಲ್ಲಿ ರಾಮ ಮತ್ತು ಲಕ್ಷ್ಮಣ ಇಬ್ಬರೂ ಸೀತೆಯನ್ನು ಹುಡುಕಿಕೊಂಡು ಹೋಗುವಾಗ, ಈ ಜಾಗದಲ್ಲಿ ವಿಶ್ರಾಂತಿ ಪಡೆದರಂತೆ. ಈ ಸಂದರ್ಭದಲ್ಲಿ ವಿಪರೀತ ಬಾಯಾರಿದ್ದ ರಾಮನು, ತಮ್ಮನಿಗೆ ನೀರು ತಂದುಕೊಡುವಂತೆ ಹೇಳುತ್ತಾನೆ. ಆಗ ಲಕ್ಷ್ಮಣನು ಬಾಣದಿಂದ ನೆಲಕ್ಕೆ ಹೊಡೆದಾಗ ನೀರು ಚಿಮ್ಮಿತಂತೆ. ಬಾಣದಿಂದ ಗಂಗೆ ಬಂದ ಕಾರಣಕ್ಕೆ, ಬಾಣಗಂಗಾ ಎಂದು ಕರೆಯಲಾಗುತ್ತದೆ. ಈಗ ಇದೇ ಘಾಟ್‌ನಲ್ಲಿ ರಿಶಿ ಕಪೂರ್ ಅವರ ಅಸ್ಥಿ ವಿಸರ್ಜನೆಯನ್ನು ಮಾಡಲಾಗಿದೆ.