ಬೆಂಗಳೂರು: ರಿಷಭ್ ಶೆಟ್ಟಿ ಅಭಿನಯದ 'ಕಾಂತಾರ' ಚಿತ್ರವು ಕಳೆದ ತಿಂಗಳೇ 100 ದಿನಗಳಲ್ಲಿ ಯಶಸ್ವಿಯಾಗಿ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡದವರು ಇತ್ತೀಚೆಗೆ ಸಮಾರಂಭವನ್ನು ಆಯೋಜಿಸಿ, ಚಿತ್ರಕ್ಕೆ ದುಡಿದ ಕಲಾವಿದರು ಮತ್ತು ತಂತ್ರಜ್ನರು ಗೌರವಿಸಿದ್ದಾರೆ. ಆದರೆ, ಇಷ್ಟಾದರೂ ರಿಷಭ್, 'ಕಾಂತಾರ' ಚಿತ್ರದ ಯಶಸ್ಸಿನ ಬಗ್ಗೆಯಾಗಲೀ, ಆ ಚಿತ್ರದ ಇತರೆ ವಿಷಯಗಳ ಕುರಿತಾಗಲೀ ಹೆಚ್ಚು ಮಾತನಾಡಿರಲಿಲ್ಲ.
ಈಗ ಇದೇ ಮೊದಲ ಬಾರಿಗೆ ಅವರು ಶನಿವಾರ, ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಆಯೋಜಿಸಿದ್ದ 'ಮುಖಾಮುಖಿ' ಎಂಬ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ, ಹಲವು ವಿಷಯಗಗಳ ಕುರಿತು ಮನಬಿಚ್ಚಿ ಮಾತಾಡಿದ್ದಾರೆ.
'ಕಾಂತಾರ' ಚಿತ್ರದಲ್ಲಿ ಶಿವನ ಪಾತ್ರ ನಿರ್ವಹಿಸಿರುವ ಕುರಿತು ಮಾತನಾಡಿರುವ ಅವರು, 'ನಾನುನು ಈ ಚಿತ್ರದಲ್ಲಿ ನಟನೆ ಮಾಡುತ್ತಿದ್ದೇನೆ ಅಂತ ಅನಿಸಲೇ ಇಲ್ಲ. ನಾನು ಆ ತರಹದ ಪಾತ್ರ ನೋಡಿದ್ದರಿಂದ, ಅದೇ ತರಹ ವರ್ತಿಸಿದೆ ಅಷ್ಟೇ. ಒಂದು ವರ್ಷ ಚಿತ್ರದ ಶೂಟಿಂಗ್ ಮುಗಿಸಿಕೊಂಡು ಬಂದ ಮೇಲೆ, ನನ್ನ ಹಲ್ಲು ಕ್ಲೀನ್ ಮಾಡೋದು ಕಷ್ಟ ಆಯ್ತು. ಒಂದು ವರ್ಷ ಬೀಡಾ ಹಾಕಿಕೊಂಡು, ಲುಂಗಿ ಉಟ್ಟುಕೊಂಡು ಊರಲ್ಲಿದ್ದೆ. ನಾನು ನೋಡಿದ ಪಾತ್ರಗಳಾದ್ದರಿಂದ ಯಾವುದೇ ಕಷ್ಟವಾಗಲಿಲ್ಲ' ಎಂದು ಹೇಳಿದ್ದಾರೆ.
'ಈ ಪಾತ್ರದ ಬಗ್ಗೆ ನಾನು ಯೋಚನೆಯೇ ಮಾಡಿರಲಿಲ್ಲ. ಚಿತ್ರ ಗೆದ್ದಾದ ಮೇಲೆ ಎಲ್ಲರೂ ಪಾತ್ರ ಎಷ್ಟು ಚಾಲೆಂಜಿಂಗ್ ಆಗಿತ್ತು ಅಂತ ಹೇಳಿದಾಗಲೇ ಯೋಚನೆ ಮಾಡಿದ್ದು. ಬಹುಶಃ ಮೊದಲೇ ಯೋಚನೆ ಮಾಡಿದ್ದರೆ ಸಿನಿಮಾ ಮಾಡೋಕೆ ಆಗುತ್ತಿರಲಿಲ್ಲವೇನೋ? ಆಗಿದ್ದರೂ ಇನ್ನೊಂದು ವರ್ಷ ಜಾಸ್ತಿಯಾಗುತ್ತಿತ್ತು' ಎಂದು ಅವರು ಹೇಳಿದ್ದಾರೆ.