ಸಿನಿವಾಣಿ

ಯಾವ ಬಾಲಿವುಡ್​ ನಟನಿಗೂ ತಮ್ಮ ಪಾತ್ರ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ರಿಷಭ್​ ಹೇಳಿದ್ದೇಕೆ?

ಮುಂಬೈ: 'ಕಾಂತಾರ' ಚಿತ್ರದಲ್ಲಿನ ತಮ್ಮ ಪಾತ್ರವನ್ನು ಯಾವ ಬಾಲಿವುಡ್​ ನಟನಿಂದಲೂ ಮಾಡುವುದಕ್ಕೆ ಸಾಧ್ಯವಿಲ್ಲ ಮತ್ತು ಆ ಪಾತ್ರದಲ್ಲಿ ಯಾವ ನಟರನ್ನೂ ಕಲ್ಪಿಸಿಕೊಳ್ಳುವುದಕ್ಕೆ ಸಾಧ್ಯ ಇಲ್ಲ ಎಂದು ರಿಷಭ್​ ಶೆಟ್ಟಿ ಹೇಳಿದ್ದಾರೆ.

ರಿಷಭ್​ ಅಭಿನಯದ ಮತ್ತು ನಿರ್ದೇಶನದ 'ಕಾಂತಾರ' ಚಿತ್ರವು ಹಿಂದಿಗೆ ಡಬ್​ ಆಗಿ ಅದ್ಭುತ ಪ್ರದರ್ಶನ ಕಾಣುತ್ತಿದೆ. ಟಾಮ್​ ಕ್ರೂಸ್​ ಅಭಿನಯದ 'ಟಾಪ್​ ಗನ್​: ಮ್ಯಾವರಿಕ್​' ಚಿತ್ರದ ಒಟ್ಟಾರೆ ಗಳಿಕೆಯನ್ನು ಚಿತ್ರದ ಹಿಂದಿ ಅವತರಣಿಕೆಯೊಂದೇ ಹಿಂದಿಕ್ಕಿದೆ. ಚಿತ್ರವು ಉತ್ತರ ಭಾರತದಲ್ಲಿ ಎರಡು ವಾರಗಳಲ್ಲಿ 35 ಕೋಟಿಗೂ ಹೆಚ್ಚು ಕಲೆಕ್ಷನ್​ ಕಂಡು ಮುನ್ನಡೆಯುತ್ತಿದೆ.

ಈ ಮಧ್ಯೆ, ಇತ್ತೀಚೆಗೆ ಸಂದರ್ಶನವೊಂದರಲ್ಲಿ, ಚಿತ್ರವೇನಾದರೂ ಹಿಂದಿಗೆ ರೀಮೇಕ್​ ಆದರೆ, ನಿಮ್ಮ ಪಾತ್ರವನ್ನು ಯಾವ ನಟ ಮಾಡಬೇಕು ಎಂದು ಬಯಸುತ್ತೀರಿ ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ ಉತ್ತರಿಸಿರುವ ರಿಷಭ್, ತಮ್ಮ ಪಾತ್ರದಲ್ಲಿ ಬೇರೆ ಯಾವ ನಟನನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ ಎಂದಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, 'ಈ ಪಾತ್ರಕ್ಕೆ ಬೇರೆ ಯಾರನ್ನೂ ಯೋಚಿಸುವುದಕ್ಕೂ ನನಗೆ ಆಗುವುದಿಲ್ಲ. ಏಕೆಂದರೆ, ಈ ಪಾತ್ರವನ್ನು ಬೇರೆಯವರಿಗೆ ಅರ್ಥ ಮಾಡಿಸುವುದಕ್ಕೆ ನನಗೆ ಸಾಧ್ಯವಿಲ್ಲ. ದೈವ ಕೋಲಕ್ಕೂ ನನಗೂ ಎಮೋಷನಲ್​ ಆದ ಸಂಬಂಧವಿದೆ. ನಾನು ಅದನ್ನು ಚಿಕ್ಕಂದಿನಿಂದ ನೋಡಿದ್ದೇನೆ. ಹಾಗಾಗಿ, ನನಗೆ ಆ ಪಾತ್ರ ಮಾಡುವುದಕ್ಕೆ ಅಷ್ಟು ಕಷ್ಟವಾಗಲಿಲ್ಲ. ಆದರೆ, ಅದನ್ನು ಬೇರೆಯವರಿಗೆ ಅರ್ಥ ಮಾಡಿಸುವುದಕ್ಕೆ ಸಾಧ್ಯವಿಲ್ಲ. ಇಲ್ಲಿ ಸಾಕಷ್ಟು ಅದ್ಭುತ ನಟರಿದ್ದಾರೆ. ಆದರೆ, ಶಿವ ಪಾತ್ರವನ್ನು ಅವರಿಗೆ ಅರ್ಥ ಮಾಡಿಸುವುದು ನನಗೆ ಬಹಳ ಕಷ್ಟ. ಹಾಗಾಗಿ, ಈ ಪಾತ್ರಕ್ಕೆ ಬೇರೆ ಯಾರನ್ನೋ ಕಲ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ' ಎಂದು ಅವರು ಹೇಳಿದ್ದಾರೆ.