ಸಿನಿವಾಣಿ

ಸರಿ-ತಪ್ಪು ಏನೇ ನಡೆದರೂ ದೈವ ನೋಡಿಕೊಳ್ಳುತ್ತದೆ ಎಂಬ ನಂಬಿಕೆಯಲ್ಲಿ ನಾನಿದ್ದೇನೆ; ರಿಷಬ್ ಶೆಟ್ಟಿ

ಬೆಂಗಳೂರು: ಕಾಂತಾರ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಸಂಪಾದಿಸಿತ್ತು. ಜತೆಗೆ ಈ ಸಿನಿಮಾ ದೇಶದಾದ್ಯಂತ ಸದ್ದು ಮಾಡಿತ್ತು. ಈ ಸಿನಿಮಾದಲ್ಲಿ ತೋರಿಸಿದ ದೈವವನ್ನು ಅನೇಕ ಜನರು ರೀಲ್ಸ್​​, ಸಾಮಾಜಿಕ ಜಾಲತಾಣ, ವಿವಿಧ ವೇದಿಕೆಗಳಲ್ಲಿ ಅನುಕರಣೆ ಮಾಡಿದ್ದರು. ಇದೀಗ ಕರಾವಳಿ ಭಾಗದಲ್ಲಿ ದೈವವನ್ನು ನಂಬಿಕೊಂಡು ಬರುತ್ತಿರುವಂತಹ ಜನರ ಆಕ್ರೋಶಕ್ಕೆ ಕಾರಣವಾಗಿತ್ತು.

ಇದರೊಂದಿಗೆ ಕಾಂತಾರ ಬಿಡುಗಡೆಯಾದ ನಂತರ, ದೈವದ ಹೆಸರಿನಲ್ಲಿ ಜನರನ್ನು ನಂಬಿಸಿ ಹಣ ಮಾಡುವಂತಹ ಕೆಲಸಗಳು ನಡೆದಿದ್ದವು. ಇದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಕಾಂತಾರ ಸಿನಿಮಾದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಈ ಬಗ್ಗೆ ಮಾತನಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ದೈವದ ಬಗೆಗೆ ಚರ್ಚೆಗಳು ನಡೆಯುತ್ತಿವೆ. ರೀಲ್ಸ್​ ಮುಂತಾದವುಗಳ ಮೂಲಕ ದೈವವನ್ನು ಅನುಕರಣೆ ಮಾಡುವುದು ಸರಿಯಲ್ಲ. ಇದಿರಿಂದ ದೈವವನ್ನು ನಂಬಿದ ಜನರ ನೋವಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

ಇನ್ನು ಕಾಂತಾರ ಸಿನಿಮಾ ಬಿಡುಗಡೆಯಾದಾಗಿನಿಂದ ನಂಬಿಕೆ, ಮೂಢನಂಬಿಕೆ ಎಂಬೆಲ್ಲಾ ಚರ್ಚೆಗಳಾಗುತ್ತಿವೆ. ನಂಬಿಕೆ ಮತ್ತು ಮೂಢನಂಬಿಕೆಯೆಂದು ವೈಯ್ಯಕ್ತಿಕ ವಿಚಾರ. ಹೀಗಿದ್ದೂ ಬೇರೆಯವರ ನಂಬಿಕೆಯನ್ನು ಯಾರೂ ಪ್ರಶ್ನೆ ಮಾಡುವುದು ಸರಿಯಲ್ಲ. ಹೀಗಾಗಿ ಇನ್ನೊಬ್ಬರ ನಂಬಿಕೆಯ ಮೇಲೆ ಮಾತಿನ ಪ್ರಹಾರ ಮಾಡಬೇಡಿ ಎಂದು ರಿಷಬ್ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ.

ದೈವಕ್ಕಿಂತ ದೊಡ್ಡವರಲ್ಲ ನಾವು ಎಂಬ ನಂಬಿಕೆಯಲ್ಲಿ ನಾನಿದ್ದೇನೆ. ಹೀಗಾಗಿ ಏನೇ ತಪ್ಪುಗಳು, ಸರಿ ಆದರೂ ದೈವವೇ ನೋಡಿಕೊಳ್ಳುತ್ತದೆ ಎಂಬ ನಿರ್ಧಾರದಲ್ಲಿ ನಾನಿದ್ದೇನೆ ಎಂದು ರಿಷಬ್ ಹೇಳಿದ್ದಾರೆ.