ಮುಂಬೈ: ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೋವಿಕ್ ಚಕ್ರವರ್ತಿಗೆ ಇಂದು ಬೇಲ್ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ನ್ಯಾಯಾಲಯವು ರಿಯಾ ಮತ್ತು ಶೋವಿಕ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಅಕ್ಟೋಬರ್ 20ರವರೆಗೂ ವಿಸ್ತರಿಸಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ರಿಯಾ ಅವರನ್ನು ವಿಚರಣೆ ಮಾಡಿದಾಗ, ಅವರಿಗೆ ಡ್ರಗ್ಸ್ ನಂಟಿರುವುದು ಪತ್ತೆಯಾಗಿತ್ತು. ಈ ಸಂಬಂಧ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಅಧಿಕಾರಿಗಳು, ರಿಯಾ ಮತ್ತು ಶೋವಿಕ್ ಅವರನ್ನು ಬಂಧಿಸಿದ್ದರು.
ಕಳೆದ 20ಕ್ಕೂ ಹೆಚ್ಚು ದಿನಗಳಿಂದ ನ್ಯಾಯಾಂಗ ಬಂಧನದಲ್ಲಿರುವ ರಿಯಾ ಮತ್ತು ಆಕೆಯ ಸಹೋದರ, ಎನ್ಸಿಬಿ ಅಧಿಕಾರಿಗಳೆದರು ಹಲವು ಸ್ಪೋಟಕ ಮಾಹಿತಿಗಳನ್ನು ಹೇಳಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ಡ್ರಗ್ಸ್ ಜಾಲದಲ್ಲಿ ಹಲವು ಬಾಲಿವುಡ್ ನಟ-ನಟಿಯರ ಲಿಂಕ್ ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆನ್ನಲಾಗಿದೆ.
ರಿಯಾ ಮತ್ತು ಶೋವಿಕ್ ಕೊಟ್ಟ ಮಾಹಿತಿಯ ಮೇಲೆ ಎನ್ಸಿಬಿ ಅಧಿಕಾರಿಗಳು ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಮತ್ತು ರಾಕುಲ್ ಪ್ರೀತ್ ಸಿಂಗ್ ಅವರನ್ನು ಕರೆದು ವಿಚಾರಣೆ ನಡೆಸಲಾಗಿದೆ.
ಹೀಗಿರುವಾಗಲೇ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ನ್ಯಾಯಾಂಗ ಬಂಧನ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು ಬಂಧನ ಅವಧಿಯನ್ನು ಅಕ್ಟೋಬರ್ 20ರವರೆಗೆ ಮತ್ತೆ ವಿಸ್ತರಿಸಿ ನ್ಯಾಯಾಲಯ ಆದೇಶ ನೀಡಿದೆ.