ಸಿನಿವಾಣಿ

ಶವಗಾರದಲ್ಲಿ ಸುಶಾಂತ್​ ಮೃತದೇಹ ನೋಡಿ ಗೆಳತಿ ರಿಯಾ ಆಡಿದ ಕೊನೆಯ ಮಾತಿದು!

ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಪ್ರಕರಣ ತುಂಬಾ ನಿಗೂಢತೆಗೆ ತಿರುಗಿದ್ದು, ನೆಚ್ಚಿನ ನಟನ ದಿಢೀರ್​ ಸಾವಿಗೆ ಅಸಲಿ ಕಾರಣವೇನೆಂದು ತಿಳಿಯಲು ಅಭಿಮಾನಿಗಳು, ಸ್ನೇಹಿತರು ಮತ್ತು ತುಂಬಾ ಆಪ್ತರು ಬಯಸಿದ್ದಾರೆ.

ಸುಶಾಂತ್ ಅವರ ಮೃತದೇಹ​ ಜೂನ್​ 14ರಂದು ಮುಂಬೈನ ಬಾಂದ್ರಾ ನಿವಾಸದಲ್ಲಿ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆಯಾಯಿತು. ಇದಕ್ಕೆ ಸಂಬಂಧಿಸಿದಂತೆ ಅನೇಕ ಆರೋಪ-ಪ್ರತ್ಯಾರೋಪಗಳ ನಡುವೆ ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್​ ಆದೇಶಿಸಿದೆ. ಇದರನ್ವಯ ಸಿಬಿಐ ತನಿಖೆ ಮುಂದುವರಿಸಿದೆ. ಇತ್ತೀಚೆಗೆ ತಿಳಿದುಬಂದ ಮಾಹಿತಿಯೆಂದರೆ ಸುಶಾಂತ್​ ಗೆಳತಿ ರಿಯಾ ಚಕ್ರವರ್ತಿ, ಶವಗಾರದಲ್ಲಿ ಸುಶಾಂತ್​ ಮೃತದೇಹ ನೋಡಿದಾಗ ಒಮ್ಮೆ ಕ್ಷಮೆ ಕೋರಿದರು ಎಂಬುದು.

ಅಂತಿಮ ಸಂಸ್ಕಾರಕ್ಕೂ ಮುನ್ನ ಸುಶಾಂತ್​ ಮೃತದೇಹವನ್ನು ಶವಪರೀಕ್ಷೆಗಾಗಿ ಶವಗಾರಕ್ಕೆ ಕೊಂಡೊಯ್ಯಲಾಗಿತ್ತು. ಈ ವೇಳೆ ಅಲ್ಲಿಗೆ ಆಗಮಿಸಿದ ರಿಯಾ, ಸುಶಾಂತ್​ ಶವವನ್ನು ನೋಡಿ "ನನ್ನ ಕ್ಷಮಿಸು ಬಾಬು" (ಐ ಆ್ಯಮ್​ ಸಾರಿ ಬಾಬು) ಎಂದು ಹೇಳಿದ್ದಾಗಿ ಪ್ರತ್ಯಕ್ಷದರ್ಶಿ ಸುಜೀತ್​ ಸಿಂಗ್​ ರಾಥೋಡ್​ ಮಾಧ್ಯಮವೊಂದರಲ್ಲಿ ತಿಳಿಸಿದ್ದಾರೆ.

ಇನ್ನು ಕರೊನಾ ಹಿನ್ನೆಲೆಯಲ್ಲಿ ಅಂತಿಮ ಸಂಸ್ಕಾರಕ್ಕೆ ಕೇಂದ್ರ ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿತ್ತು. ಅದರನ್ವಯ 20 ಮಂದಿ ಮಾತ್ರ ಅಂತಿಮ ವಿಧಿವಿಧಾನಗಳಲ್ಲಿ ಭಾಗವಹಿಸಬುದು ಎಂದಿತ್ತು. ಹೀಗಾಗಿ ಸುಶಾಂತ್​ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ 20 ಮಂದಿಯ ಪಟ್ಟಿಯಲ್ಲಿ ರಿಯಾ ಹೆಸರು ಇರಲಿಲ್ಲ. ಈ ಸಂಬಂಧ ರಿಯಾ ಪರ ವಕೀಲರು ಇತ್ತೀಚೆಗಷ್ಟೇ ಹೇಳಿಕೆಯೊಂದನ್ನು ನೀಡಿ, ಸುಶಾಂತ್​ ಕುಟುಂಬ ಜೂನ್​ 15ರಂದು ನಡೆದ ಅಂತಿಮ ಸಂಸ್ಕಾರಕ್ಕೆ ರಿಯಾಗೆ ಅನುಮತಿ ನೀಡಲಿಲ್ಲ ಎಂದಿದ್ದರು.

ಸುಶಾಂತ್​ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿರುವುದು ಅಭಿಮಾನಿಗಳಲ್ಲಿ ನಿಖರ ಕಾರಣ ತಿಳಿದುಕೊಳ್ಳುವ ಹಂಬಲ ಹೆಚ್ಚಿದೆ. ಇತ್ತ ಸುಶಾಂತ್​ ಕುಟುಂಬ ರಿಯಾ ವಿರುದ್ಧ ಬೊಟ್ಟು ಮಾಡಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆಂದು ಬಿಹಾರದಲ್ಲಿ ಎಫ್​ಐಆರ್​ ದಾಖಲಿಸಿದ್ದಾರೆ. ಆದರೆ, ಇದನ್ನು ರಿಯಾ ತಳ್ಳಿಹಾಕಿದ್ದು, ಇದೆಲ್ಲದರ ನಡುವೆ ಸಿಬಿಐಗೆ ತನಿಖೆ ಹಸ್ತಾಂತರವಾಗಿದ್ದು, ಮುಂದಿನ ದಿನ ಪ್ರಕರಣ ಮತ್ಯಾವ ತಿರುವ ಪಡೆದುಕೊಳ್ಳಲಿದೆ ಎಂಬ ಕುತೂಹಲವಿದೆ. (ಏಜೆನ್ಸೀಸ್​)