ಸಿನಿವಾಣಿ

ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿದ್ದರೆ, ದಿನಕ್ಕೆ 100 ಜನ ಸಾಯುತ್ತಿದ್ದರು

chetannadiger

ಸುಶಾಂತ್​ ಸಿಂಗ್​ ಸಾವಿನಿಂದ ಇಡೀ ಬಾಲಿವುಡ್​ನಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಆಗಾಗ ಕೇಳಿ ಬರುತ್ತಿದ್ದ ನೆಪೋಟಿಸಂ ಎಂಬ ಪದ, ಕಳೆದ ಮೂರು ದಿನಗಳಿಂದ ಬಾಲಿವುಡ್​ನಲ್ಲಿ ವಿಪರೀತವಾಗಿ ಕೇಳಿ ಬರುತ್ತಿದೆ. ಹಿಂದಿ ಚಿತ್ರರಂಗದಲ್ಲಿ ಸ್ವಜನಪಕ್ಷಪಾತ ವಿಪರೀತ ಇದ್ದು, ಕರಣ್​ ಜೋಹಾರ್​ ಮುಂತಾದ ಜನಪ್ರಿಯ ನಿರ್ದೇಶಕರು ಅದನ್ನು ಪೋಷಿಸುತ್ತಿದ್ದಾರೆ. ಇದರಿಂದಾಗಿಯೇ ಸುಶಾಂತ್​ರಂತಹ ಕಲಾವಿದರಿಗೆ ಸರಿಯಾಗಿ ಅವಕಾಶಗಳು ಸಿಗುತ್ತಿರಲಿಲ್ಲ ಮತ್ತು ಅದೇ ಕಾರಣಕ್ಕೆ ಅವರು ಆತ್ಮಹತ್ಯೆಗೆ ಶರಣಾಗಬೇಕಾಯಿತು ಎಂಬ ವಾದ ಕೇಳಿ ಬರುತ್ತಿದೆ.

ಈಗಾಗಲೇ ಇದು ಸುಳ್ಳು ಎಂದು ಹಲವರು ಪ್ರತಿಪಾದಿಸಿರುವುದಷ್ಟೇ ಅಲ್ಲ, ಕರಣ್​ ಜೋಹಾರ್​ ಪರವಾಗಿ ಹಲವು ಬಾಲಿವುಡ್​ ಸೆಲೆಬ್ರಿಟಿಗಳು ನಿಂತಿದ್ದಾರೆ. ಈಗ ಆ ಸಾಲಿಗೆ ರಾಮ್​ಗೋಪಾಲ್​ ವರ್ಮಾ ಸಹ ಸೇರಿಕೊಂಡಿದ್ದಾರೆ. ಕರಣ್ ಜತೆಗೆ ಆಗಾಗ ಮುಸುಕಿನ ಗುದ್ದಾಟ ಮಾಡುತ್ತಲೇ ಇರುವ ವರ್ಮಾ ಸಹ ಪರವಾಗಿ ನಿಂತಿರುವುದಷ್ಟೇ ಅಲ್ಲ, ಬಾಲಿವುಡ್​ ಹೇಗೆ ಕೆಲಸ ಮಾಡುತ್ತದೆ ಎಂದು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್​ಗಳನ್ನು ವರ್ಮಾ ಮಂಗಳವಾರದಿಂದ ಮಾಡುತ್ತಲೇ ಬಂದಿದ್ದಾರೆ.

ಸುಶಾಂತ್​ ಸಾವಿಗೆ ಎಲ್ಲರೂ ಕರಣ್​ ಜೋಹಾರ್​ ಅವರನ್ನು ದೂಷಿಸುತ್ತಿರುವುದು, ಚಿತ್ರರಂಗದ ಬಗ್ಗೆ ಅವರ ತಿಳುವಳಿಕೆ ಎಷ್ಟಿದೆ ಎಂಬುದು ಸ್ಪಷ್ಟವಾಗುತ್ತದೆ. ಒಂದು ಪಕ್ಷ, ಕರಣ್​ಗೆ ಸುಶಾಂತ್​ ಜತೆಗೆ ಏನಾದರೂ ಸಮಸ್ಯೆ ಇದ್ದರೂ, ಅದು ವೈಯಕ್ತಿಕ. ಅವರು ಯಾರ ಜತೆಗೆ ಕೆಲಸ ಮಾಡಬೇಕು, ಯಾರ ಜತೆಗೆ ಮಾಡಬಾರದು ಎಂಬುದು ಅವರಿಗೆ ಬಿಟ್ಟಿದ್ದು. ಸುಶಾಂತ್​ ಜತೆಗೆ ಕರಣ್​ ಕೆಲಸ ಮಾಡಲಿಲ್ಲ ಎಂದ ಮಾತ್ರಕ್ಕೆ ಅವರನ್ನು ದೂಷಿಸುವುದು ಸರಿಯಲ್ಲ ಎಂದು ವರ್ಮಾ ಟ್ವೀಟ್​ ಮಾಡಿದ್ದಾರೆ.

ಇಷ್ಟಕ್ಕೂ ಸುಶಾಂತ್​ ನಿನ್ನೆ, ಮೊನ್ನೆ ಬಂದ ಹುಡುಗನಲ್ಲ. ಕಳೆದ 12 ವರ್ಷದಿಂದ ಸಾಕಷ್ಟು ಜನಪ್ರಿಯತೆ, ಹಣ, ಯಶಸ್ಸು ಎಲ್ಲವನ್ನೂ ನೋಡಿದ್ದಾರೆ. ಅವರನ್ನೇ ಹೊಸಬರು ಅಥವಾ ಹೊರಗಿನವರು ಎಂದು ಕರೆದರು, ಅವರಷ್ಟೂ ಹೆಸರು ಮಾಡದ ಜನರಿಗೆ ಏನನ್ನಬೇಕು. ಸುಶಾಂತ್​ ಹತ್ತಿರಕ್ಕೂ ಎಷ್ಟೋ ಜನ ಉದಯೋನ್ಮುಖ ಕಲಾವಿದರಿಗೆ ಹೋಗುವುದಕ್ಕೆ ಸಾಧ್ಯವಾಗಿಲ್ಲ. ಅವರೆಲ್ಲಾ ಆತ್ಮಹತ್ಯೆ ಮಾಡಿಕೊಂಡರೆ, ದಿನಕ್ಕೆ 100 ಜನ ಆತ್ಮಹತ್ಯ ಮಾಡಿಕೊಳ್ಳಬೇಕಾಗುತ್ತದೆ. ಇರುವುದರಲ್ಲಿ ಖುಷಿಪಡುವುದಕ್ಕೆ ಸಾಧ್ಯವಿಲ್ಲ ಎಂದರೆ, ನಾವು ಯಾವತ್ತೂ ಖುಷಿಯಾಗಿರುವುದಕ್ಕೆ ಸಾಧ್ಯವೇ ಇಲ್ಲ ಎಂದು ವರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಬಾಲಿವುಡ್​ನಲ್ಲಿ ಇರುವವರೆಲ್ಲಾ ಒಳಗಿನವರೇನಲ್ಲ. ಅವರು ಯಾವತ್ತೋ ಒಂದು ದಿನ ಹೊರಗಿನವರಾಗಿದ್ದವರು. ಅಮಿತಾಭ್​ ಬಚ್ಚನ್​​ರಿಂದ ಹಿಡಿದು ಕರಣ್​ ಜೋಹಾರ್​ವರೆಗೂ ಹಲವು ಸೆಲೆಬ್ರಿಟಿಗಳು ಚಿತ್ರರಂಗದಲ್ಲಿ ಇದ್ದಾರೆ ಎಂದರೆ, ಅವರು ಒಳಗಿನವರು, ಅವರಿಗೆ ಗಾಡ್​ಫಾದರ್​ಗಳಿದ್ದಾರೆ ಎಂದರರ್ಥವಲ್ಲ. ಅವರೆಲ್ಲಾ ಕಷ್ಟಪಟ್ಟು ಮೇಲೆ ಬಂದವರು. ಅವರ ಸಿನಿಮಾಗಳನ್ನು ಕೋಟ್ಯಂತರ ಜನ ನೋಡಿದ್ದಾರೆ. ಅವರು ಸಾಕಷ್ಟು ಸೋಲು, ನಷ್ಟ ಕಂಡಿದ್ದಾರೆ. ಹಾಗೆ ನೋಡಿದರೆ, ಇಲ್ಲಿ ಹೊರಗಿನವರು ಕಷ್ಟಪಟ್ಟಿರುವುದಕ್ಕಿಂತ, ಒಳಗಿನವರು ಕಷ್ಟಪಟ್ಟಿದ್ದೇ ಹೆಚ್ಚು ಎಂದು ವರ್ಮಾ ಟ್ವೀಟ್​ ಮಾಡಿದ್ದಾರೆ.