| ಚೇತನ್ ನಾಡಿಗೇರ್
ಅವನಿಗೆ ತನ್ನ ಊರಿನಲ್ಲಿನ ಒತ್ತೆಯಿಟ್ಟಿರುವ ಮನೆಯನ್ನು ಬಿಡಿಸಿ, ತಾಯಿಯನ್ನು ನೆಮ್ಮದಿಯಾಗಿಟ್ಟು ಆ ನಂತರ ಮದುವೆಯಾಗುವಾಸೆ. ಅವಳಿಗೆ ಮನೋರೋಗಕ್ಕೆ ತುತ್ತಾಗಿರುವ ಅಕ್ಕ ವಾಸಿಯಾಗಿ, ಅವಳು ಮದುವೆಯಾದ ಮೇಲೆ ತಾನು ಮದುವೆಯಾಗುವಾಸೆ. ಮದುವೆ ಲೇಟ್ ಆದರೂ, ಇಬ್ಬರೂ ಒಟ್ಟಿಗೆ ಒಂದೇ ಸೂರಿನಲ್ಲಿ ಬದುಕುತ್ತಿರುತ್ತಾರೆ. ಅವಳು ಶಿಸ್ತು, ಅವನದ್ದು ಸ್ವಲ್ಪ ಅಶಿಸ್ತು. ಅವಳು ನೇರಾನೇರ. ಅವನದ್ದು ಕಳ್ಳಾಟ. ಅದೊಂದು ಕಹಿ ಘಟನೆಯಿಂದ ಇಬ್ಬರೂ ದೂರಾಗುತ್ತಾರೆ. ಅವನು ನೋವು ಮರೆಯುವುದಕ್ಕೆ ಕುಡಿತದ ಮೊರೆ ಹೋಗುತ್ತಾನೆ. ಅವಳು ಕಾರಣಾಂತರಗಳಿಂದ ಇನ್ನೊಬ್ಬನನ್ನು ಮದುವೆಯಾಗುವುದಕ್ಕೆ ಒಪ್ಪುತ್ತಾಳೆ. ಅವರಿಬ್ಬರ ಪ್ರೀತಿಕಥೆ ಕಮರಿಹೋಗುತ್ತದಾ? ಪ್ರೇಮಕಥೆಗಳಲ್ಲೊಂದು ಹಳೆಯ ಫಾಮುಲಾ ಇದೆ. ಎಲ್ಲೋ ಇರುವ ಹುಡುಗ, ಮತ್ತೆಲ್ಲೋ ಇರುವ ಹುಡುಗಿ ಆಕಸ್ಮಿಕವಾಗಿ ಭೇಟಿಯಾಗುತ್ತಾರೆ. ಒಂದು ಹಂತದಲ್ಲಿ ಹತ್ತಿರವಾಗಿ, ಇನ್ನೊಂದು ಹಂತದಲ್ಲಿ ದೂರಾಗುತ್ತಾರೆ. ಕೊನೆಗೆ ಇಬ್ಬರೂ ಒಂದಾಗುವ ಮೂಲಕ ಕಥೆ ಸುಖಾಂತ್ಯವಾಗುತ್ತದೆ. ‘ನಿನ್ನ ಸನಿಹಕೆ’ ಸಹ ಇದೇ ಫಾಮುಲಾ ಆಧರಿಸಿ ಮಾಡಲಾದ ಒಂದು ಚಿತ್ರ.
ಕಥೆ ಹಳೆಯದು ಎಂದ ಮಾತ್ರಕ್ಕೆ ಚಿತ್ರವೂ ಹಳೆಯದು ಎಂದು ಭಾವಿಸಬೇಕಿಲ್ಲ. ಈ ನಿಟ್ಟಿನಲ್ಲಿ ಸೂರಜ್ ಒಂದಿಷ್ಟು ರಿಸರ್ಚ್ ಮಾಡಿದ್ದಾರೆ. ಇವತ್ತಿನ ಪ್ರೇಕ್ಷಕರು ಏನು ಬಯಸುತ್ತಾರೆ, ಹೇಗೆ ಯೋಚಿಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅಷ್ಟೇ ಅಲ್ಲ, ಇವತ್ತಿನ ಕಾಲಘಟ್ಟಕ್ಕೆ ಹಳೆಯ ಕಥೆಯನ್ನು ಹೊಂದಿಸಿ ಚಿತ್ರ ಮಾಡಿದ್ದಾರೆ. ಇಲ್ಲಿ ಲಿವ್ಇನ್ ರಿಲೇಶನ್ಶಿಪ್ ಇದೆ. ಬ್ಯಾಚಲರೇಟ್ ಪಾರ್ಟಿ ಇದೆ. ಈ ಸಲ ಕಪ್ ನಮ್ಮದೇ ಎಂಬ ಆಶಾಭಾವನೆಯಿಂದ ಕಾಯುವ ಹುಡುಗರಿದ್ದಾರೆ. ಸೈಬರ್ ಕ್ರೖೆಮ್ ಸಹ ಇದೆ. ಇಷ್ಟೆಲ್ಲ ಹೊಸತನ ತುಂಬುವ ಪ್ರಯತ್ನ ಮಾಡುವುದರ ಜತೆಗೆ, ಚಿತ್ರಕಥೆ ಮತ್ತು ವೇಗದ ಕಡೆಯೂ ಸೂರಜ್ ಇನ್ನೊಂದಿಷ್ಟು ಗಮನಹರಿಸಿದ್ದರೆ ಚೆನ್ನಾಗಿರುತ್ತಿತ್ತು. ಒಂದಿಷ್ಟು ಬಿಲ್ಡಪ್ ಕಡಿಮೆ ಮಾಡಿ, ಭಗ್ನಪ್ರೇಮದ ಹೆಸರಿನಲ್ಲಿರುವ ಕುಡಿತದ ದೃಶ್ಯಗಳನ್ನು ಟ್ರಿಮ್ ಮಾಡಿ, ಬೇಡದ ದೃಶ್ಯಗಳನ್ನು ಕಟ್ ಮಾಡಿದ್ದರೆ, ಚಿತ್ರ ಜನರ ಮನಸ್ಸಿಗೆ ಇನ್ನಷ್ಟು ಹತ್ತಿರವಾಗುತ್ತಿತ್ತು. ಆದರೂ ಮೊದಲ ನಿರ್ದೇಶನದಲ್ಲೇ ಸೂರಜ್ ಗಮನ ಸೆಳೆಯುತ್ತಾರೆ.
ನಟನೆಯ ವಿಷಯದಲ್ಲಿ ಇದೇ ಮಾತನ್ನು ಹೇಳುವುದು ಕಷ್ಟ. ಭಾವನೆಗಳನ್ನು ತೆರೆಯ ಮೇಲೆ ಚೆನ್ನಾಗಿ ಮೂಡಿ ಸುವುದಕ್ಕೆ ಅವರು ಇನ್ನಷ್ಟು ಪ್ರಯತ್ನ ಮಾಡಬೇಕು. ನೋವಿರಲಿ, ನಲಿವಿರಲಿ ಎಲ್ಲ ದೃಶ್ಯಗಳಲ್ಲೂ ಸೂರಜ್ ಒಂದೇ ತರಹ ಕಾಣಿಸುತ್ತಾರೆ. ಧನ್ಯಾ ರಾಮ್ುಮಾರ್ ನಟಿಯಾಗಿ ಇನ್ನಷ್ಟು ದೂರ ಸಾಗುವ ಭರವಸೆ ಮೂಡಿಸುತ್ತಾರೆ. ಕೆಲವು ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವಲ್ಲಿ ಧನ್ಯಾ ಗಮನಸೆಳೆಯುತ್ತಾರೆ. ಮಿಕ್ಕಂತೆ ಮಂಜುನಾಥ ಹೆಗಡೆ, ಅರುಣಾ ಬಾಲರಾಜ್, ರಜನಿಕಾಂತ್ ಎಲ್ಲರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಚಿತ್ರದ ಹೈಲೈಟ್ ಎಂದರೆ ಅದು ರಘು ದೀಕ್ಷಿತ್ ಹಾಡುಗಳು. ಸನ್ನಿವೇಶ ಮತ್ತು ಭಾವನೆಗಳಿಗೆ ತಕ್ಕಂತೆ ರಘು ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಹಿನ್ನೆಲೆ ಸಂಗೀತವೂ ಇಷ್ಟವಾಗುತ್ತದೆ.