| ಚೇತನ್ ನಾಡಿಗೇರ್
‘ನಾನು ತಿರುಗಿ ಹೊಡೆಯದಿದ್ದರೆ, ಜನ ನಮ್ಮನ್ನ ಕೈಯಲ್ಲಿ ಆಗದೋರು ಅಂದುಕೊಳ್ಳುತ್ತಾರೆ. ನಾನು ಅವನನ್ನ ಬಿಡಲ್ಲ ...’
ಹಾಗಂತ ತೀರ್ವನಿಸಿ ಬಿಡುತ್ತಾನೆ ಜಯರಾಜ್. ಅಲ್ಲಿಯವರೆಗೂ ಅವನು ಸೈದ್ಧಾಂತಿಕ ಕಾರಣಕ್ಕೆ ರೌಡಿಸಂ ಮಾಡುತ್ತಿದ್ದೇನೆ ಅಂದುಕೊಂಡಿರುತ್ತಾನೆ. ಉಳ್ಳವರ ಹತ್ತಿರ ಕಿತ್ತುಕೊಂಡು, ಇಲ್ಲದಿರುವವರಿಗೆ ಕೊಡಬೇಕು ಎಂದು ‘ಬುದ್ದಿಯೋರು’ ಹೇಳಿದ ಮಾತಿಗೆ ಗಲಾಟೆ ಮಾಡುತ್ತಿರುತ್ತಾನೆ. ಯಾವಾಗ ತನ್ನದಲ್ಲದ ತಪ್ಪಿಗೆ ಮುನಿಸಿಕೊಂಡು ಸ್ನೇಹಿತ ತನ್ನ ಮೇಲೆ ಅಟ್ಯಾಕ್ ಮಾಡುತ್ತಾನೋ, ಅಲ್ಲಿಂದ ಅವನ ಯೋಚನೆ, ಸಿದ್ಧಾಂತ ಎಲ್ಲವೂ ಬದಲಾಗುತ್ತದೆ. ಕರಗದಲ್ಲಿ ತನ್ನ ಮೇಲೆ ಆದ ಹಲ್ಲೆಯನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾನೆ. ಗೆಳೆಯನನ್ನು ಮುಗಿಸಲು ಜಿದ್ದಾಜಿದ್ದಿಗೆ ಬೀಳುತ್ತಾನೆ.
ಅಲ್ಲಿಯವರೆಗೂ ‘ಹೆಡ್ ಬುಷ್’ ಚಿತ್ರದಲ್ಲಿ ಶೋಷಣೆ, ಸಿದ್ಧಾಂತ, ಪ್ರಭುತ್ವ ಮುಂತಾದ ದೊಡ್ಡದೊಡ್ಡ ಪದಗಳು ಕೇಳಿಬರುತ್ತಿರುತ್ತವೆ. ಆದರೆ, ಈ ಘಟನೆಯ ನಂತರ ಪಕ್ಕಾ ಸೇಡಿನ ಕಥೆಯಾಗುತ್ತದೆ. ಯಾರು, ಯಾರಿಗೆ, ಹೇಗೆ, ಎಲ್ಲಿ ಹೊಡೆಯುತ್ತಾರೆ ಎನ್ನುವುದಷ್ಟೇ ಮುಖ್ಯವಾಗುತ್ತದೆ.
‘ಅಗ್ನಿ’ ಶ್ರೀಧರ್ ಅವರ ‘ದಾದಾಗಿರಿಯ ದಿನಗಳು’ ಪುಸ್ತಕವನ್ನು ಆಧರಿಸಿ ಮಾಡಲಾಗಿರುವ ಈ ಚಿತ್ರದಲ್ಲಿ ಬೆಂಗಳೂರಿನ ಅಂಡರ್ವರ್ಲ್ಡ್ ಕುರಿತಾದ ಕಥೆ ಇದೆ. 70ರ ದಶಕದಲ್ಲಿ ಭೂಗತಲೋಕ ಹೇಗೆ ಶುರುವಾಯಿತು ಎನ್ನುವುದರ ಜತೆಗೆ ರಾಜಕಾರಣಿಗಳು ಹೇಗೆ ರೌಡಿಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡರು ಎಂಬುದನ್ನು ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗಿದೆ. ಹಾಗಂತ ಇದೇ ಪುಸ್ತಕವನ್ನು ಆಧರಿಸಿದ ‘ಆ ದಿನಗಳು’ ಚಿತ್ರದ ಜತೆಗೆ ಈ ಚಿತ್ರವನ್ನು ಹೋಲಿಸುವಂತಿಲ್ಲ. ಎರಡೂ ನೈಜ ಘಟನೆಗಳನ್ನು ಮತ್ತು ನೈಜ ಪಾತ್ರಗಳನ್ನಾಧರಿಸಿದ ಚಿತ್ರವಾದರೂ, ಅದು ಪಕ್ಕಾ ಕ್ಲಾಸ್ ಆಗಿತ್ತು. ಇದು ಪಕ್ಕಾ ಮಾಸ್ ಆಗಿದೆ. ಅಲ್ಲಿ ಸೌಮ್ಯತೆ ಇತ್ತು, ಇಲ್ಲಿ ರೌದ್ರಾವತಾರ ಇದೆ. ಅಲ್ಲಿ ಮೌನ ಇತ್ತು. ಇಲ್ಲಿ ಕ್ರೌರ್ಯ ಇದೆ. ಅಲ್ಲಿ ಪ್ರೇಮದ ಕಥೆ ಇತ್ತು. ಇಲ್ಲಿ ಸ್ನೇಹದ ಕಥೆ ಇದೆ. ಈ ಮೂಲಕ ಒಬ್ಬ ಲೇಖಕರ, ಒಂದೇ ಪುಸ್ತಕದಲ್ಲಿನ ವಿಷಯಗಳು ಎರಡು ಬೇರೆ ತರಹದ ಪ್ರಯತ್ನಗಳಿಗೆ ಸಾಕ್ಷಿಯಾಗಿವೆ.
ಒಂದು ಕಡೆ ದಿವಂಗತ ದೇವರಾಜ ಅರಸು ಅವರ ಕಾಲಘಟ್ಟದ ಬಗ್ಗೆ ಮಾತನಾಡುತ್ತಲೇ, ಇನ್ನೊಂದು ಕಡೆ ಜಯರಾಜ್ ಜಮಾನದ ಬಗ್ಗೆಯೂ ಹೇಳುವ ಪ್ರಯತ್ನ ಮಾಡಲಾಗಿದೆ. ಸಾಕಷ್ಟು ವಿಚಾರಗಳಿರುವುದರಿಂದ ಮೊದಲಾರ್ಧ ಪರಿಸರ, ಕಥೆ ಮತ್ತು ಪಾತ್ರಗಳನ್ನು ಪರಿಚಯ ಮಾಡಿಕೊಡಲಾಗಿದೆ. ಈ ಹಂತ ಸ್ವಲ್ಪ ನಿಧಾನವೆಂದನಿಸಬಹುದು. ಚಿತ್ರ ಶುರುವಾಗುವುದು ದ್ವಿತೀಯಾರ್ಧದಲ್ಲಿ. ಜಯರಾಜ್ ಮತ್ತು ಗಂಗ ನಡುವಿನ ಭಿನ್ನಾಭಿಪ್ರಾಯದ ನಂತರ ಚಿತ್ರ ತಿರುವುದು ಪಡೆಯುವುದಷ್ಟೇ ಅಲ್ಲ, ವೇಗ ಸಿಗುತ್ತದೆ.
ಧನಂಜಯ್ಗೆ ರೌಡಿ ಪಾತ್ರ ಹೊಸದಲ್ಲ. ಆದರೆ, ಜಯರಾಜ್ ಪಾತ್ರವನ್ನು ಅವರು ನಿರ್ವಹಿಸಿರುವ ರೀತಿ ಗಮನಸೆಳೆಯುತ್ತದೆ. ವಸಿಷ್ಠ ಸಿಂಹ, ದೇವರಾಜ್, ಶ್ರುತಿ ಹರಿಹರನ್, ರಘು ಮುಖರ್ಜಿ, ಯೋಗಿ ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ರವಿಚಂದ್ರನ್ ಹಾಗೆ ಬಂದು ಹೀಗೆ ಹೋಗುತ್ತಾರೆ. ಚರಣ್ ರಾಜ್ ಅವರ ಹಿನ್ನೆಲೆ ಸಂಗೀತ ಚಿತ್ರದ ಪ್ಲಸ್ಪಾಯಿಂಟ್ಗಳಲ್ಲೊಂದು. ಚಿತ್ರದಲ್ಲಿ ಸಾಕಷ್ಟು ಬೈಗುಳಗಳಿವೆ. ಪೊಲೀಸರನ್ನು ಅವಾಚ್ಯವಾಗಿ ನಿಂದಿಸಲಾಗಿದೆ. ಇವೆಲ್ಲಾ ಸೆನ್ಸಾರ್ ಮಂಡಳಿಯವರ ಕಣ್ತಪ್ಪಿಸಿ ಹೇಗೆ ಹೊರಗೆ ಬಂತು ಎಂಬುದು ಮಾತ್ರ ಕೊನೆಯವರೆಗೂ ಅರ್ಥವಾಗುವುದಿಲ್ಲ.