ಸಿನಿವಾಣಿ

ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಪವಿತ್ರಾ ಗೌಡ ಟೆಂಪಲ್​ ರನ್​: ದರ್ಶನ್​ ಹೆಸರಲ್ಲಿ ಅರ್ಚನೆ! Pavithra Gowda

Pavithra Gowda : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿ ಜೈಲು ಪಾಲಾಗಿ ಬರೋಬ್ಬರಿ 6 ತಿಂಗಳ ಬಳಿಕ ಪರಪ್ಪನ ಅಗ್ರಹಾರ ಜೈಲಿನಿಂದ ಇಂದು (ಡಿ.17) ಬಿಡುಗಡೆಯಾಗಿರುವ ನಟ ದರ್ಶನ್​ ಗೆಳತಿ ಪವಿತ್ರಾ ಗೌಡ ಟೆಂಪಲ್​ ರನ್​ ಮಾಡುತ್ತಿದ್ದಾರೆ.

ಇಂದು ಬೆಳಗ್ಗೆ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ತಮ್ಮ ಕುಟುಂಬದವರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದಾರೆ. ಪವಿತ್ರಾ ಗೌಡ ಬಿಡುಗಡೆಗೆ ಅವರ ತಾಯಿ ಹರಕೆ ಕಟ್ಟಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಹರಕೆ ತೀರಿಸಿದ್ದಾರೆ. ಇದೇ ಸಂದರ್ಭದಲ್ಲಿ ನಟ ದರ್ಶನ್ ಹೆಸರಲ್ಲಿ ಅರ್ಚನೆ ಸಹ ಮಾಡಿಸಿದ್ದಾರೆ.

ಬಿಡುಗಡೆ ಬಳಿಕ ಜೈಲಿನ ಆವರಣದಲ್ಲಿರುವ ಮುನೇಶ್ವರ ದೇವಸ್ತಾನಕ್ಕೆ ತೆರಳಿದ ಪವಿತ್ರಾ ಕೈ ಮುಗಿದು ಅಲ್ಲಿಂದ ಹೊರಟರು. ಇದೇ ಸಂದರ್ಭದಲ್ಲಿ ಪವಿತ್ರಾ ಗೌಡ ಸಂಬಂಧಿ ದೇವಸ್ಥಾನದ ಮುಂದೆ ಈಡುಗಾಯಿ ಹೊಡೆದರು. ಇದಾದ ಬಳಿಕ ಕಾರು ಏರಿ ತಲಘಟ್ಟಪುರ ಕಡೆ ಪವಿತ್ರಗೌಡ ಹೊರಟರು. ಅಲ್ಲಿನ ವಜ್ರಮುನೇಶ್ವರ ದೇವಸ್ಥಾನಕ್ಕೆ ತೆರಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ದರ್ಶನ್​ ಹೆಸರಲ್ಲಿ ಅರ್ಚನೆ ಸಹ ಮಾಡಿಸಿದರು. ಇದಕ್ಕೂ ಮುನ್ನ ಅರ್ಚನೆ ಸಮಯದಲ್ಲಿ ಪವಿತ್ರಾ ಅವರ ತಾಯಿ ದರ್ಶನ್ ಹೆಸರನ್ನು ಹೇಳಲಾ ಎಂದು ಮಗಳನ್ನು ಕೇಳಿದರು. ಅದಕ್ಕೆ ಪವಿತ್ರಾ ಹೂ ಎಂದು ಪ್ರತಿಕ್ರಿಯಿಸಿದರು. ಬಳಿಕ ದರ್ಶನ್ ಹೆಸರು ಹೇಳಿ ಅರ್ಚನೆ ಮಾಡಿಸಿದರು.​ ಇದೇ ಸಂದರ್ಭದಲ್ಲಿ ಪವಿತ್ರಗೌಡ ತಲೆಗೆ ಅರ್ಚಕರು ನೀರು ಹಾಕಿದರು.

ಅಂದಹಾಗೆ ಹೈಕೋರ್ಟ್​ನಿಂದ ಷರತ್ತುಬದ್ಧ ಜಾಮೀನು ಮಂಜೂರಾಗಿರುವ ಹಿನ್ನೆಲೆಯಲ್ಲಿ ಪವಿತ್ರಾ ಗೌಡ ಬಿಡುಗಡೆಯಾಗಿದ್ದಾರೆ. ಕಳೆದ ಜೂನ್​ 20ರಂದು ಜೈಲು ಪಾಲಾಗಿದ್ದರು. ಸುಮಾರು 6 ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇದೇ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ಒಂದೂವರೆ ತಿಂಗಳ ಹಿಂದೆಯೇ ಅನಾರೋಗ್ಯ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದರು. ಇದೀಗ ಪೂರ್ಣ ಪ್ರಮಾಣದ ಜಾಮೀನು ಸಿಕ್ಕಿರುವುದರಿಂದ ದರ್ಶನ್​ ಕೂಡ ರಿಲೀಫ್​ ಆಗಿದ್ದಾರೆ. ನಿನ್ನೆಯಷ್ಟೇ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮನೆಗೆ ತೆರಳಿದ್ದಾರೆ.

ಈ ಪ್ರಕರಣದ ಉಳಿದ ಆರೋಪಿಗಳಿಗೂ ಜಾಮೀನು ದೊರೆತಿದ್ದು, ಅವರು ಕೂಡ ಆರು ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾಗುವ ಭಾಗ್ಯ ಸಿಕ್ಕಿದೆ.