Renukaswamy Death case : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಹಾಗೂ ಗೆಳತಿ ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳಿಗೆ ನೀಡಿರುವ ಜಾಮೀನು ಪ್ರಶ್ನಿಸಿ (ಜಾಮೀನು ರದ್ದು ಕೋರಿ) ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ನಿನ್ನೆ (ಜುಲೈ 24) ಎರಡೂ ಕಡೆಯ ವಾದನ್ನು ಆಲಿಸಿ, ತೀರ್ಪು ಕಾಯ್ದಿರಿಸಿದೆ. ಗಮನಾರ್ಹ ಸಂಗತಿ ಏನೆಂದರೆ, ದರ್ಶನ್ಗೆ ಜಾಮೀನು ನೀಡಿರುವ ಹೈಕೋರ್ಟ್ ಕ್ರಮವನ್ನು ಸುಪ್ರೀಂಕೋರ್ಟ್ ಟೀಕಿಸಿದೆ. ಇದರ ಬೆನ್ನಲ್ಲೇ ನಟಿ ರಮ್ಯಾ ಟ್ವೀಟ್ ಮಾಡಿರುವುದು ಎಲ್ಲರ ಗಮನ ಸೆಳೆದಿದೆ.
ಸುಪ್ರೀಂಕೋರ್ಟ್ ಹೇಳಿಕೆಗಳನ್ನು ಉಲ್ಲೇಖಿಸಿ ಲೈವ್ ಲಾ ಸುದ್ದಿ ಮಾಧ್ಯಮ ಮಾಡಿರುವ ವರದಿಯ ಸ್ಕ್ರೀನ್ಶಾಟ್ ಅನ್ನು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ರಮ್ಯಾ, ಭಾರತದ ಸಾಮಾನ್ಯ ಜನರಿಗೆ ಸುಪ್ರೀಂಕೋರ್ಟ್ ಒಂದು ಆಶಾಕಿರಣ. ರೇಣುಕಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎಂದು ಬರೆದುಕೊಂಡಿದ್ದಾರೆ.
ನಟ ದರ್ಶನ್ ಹಾಗೂ ಪವಿತ್ರಾ ಗೌಡಗೆ ಜಾಮೀನು ನೀಡಿದ ಕ್ರಮವನ್ನು ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಟೀಕಿಸಿದರು. ಹೈಕೋರ್ಟ್ ಆದೇಶವನ್ನು ನೀಡಿದ ರೀತಿ ತುಂಬಾ ವಿಷಾದವಿದೆ. ಇತರ ಪ್ರಕರಣಗಳಲ್ಲಿಯೂ ಹೈಕೋರ್ಟ್ ಅದೇ ರೀತಿಯ ಆದೇಶವನ್ನು ನಿರ್ದೇಶಿಸುತ್ತದೆಯೇ? ಕೊಲೆ ಪ್ರಕರಣಕ್ಕೆ ಬಂಧನದ ಆಧಾರಗಳನ್ನು ಒದಗಿಸಲಾಗಿಲ್ಲ ಎಂದು ಹೈಕೋರ್ಟ್ ಹೇಳಿರುವುದು ತೊಂದರೆದಾಯಕವಾಗಿದೆ. ಇದು ಪ್ರಾಥಮಿಕವಾಗಿ, ನ್ಯಾಯಾಂಗ ಅಧಿಕಾರದ ದುರ್ಬಳಕೆಯಾಗಿದೆ. ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಅಂತಹ ತಪ್ಪನ್ನು ಮಾಡುವುದು ಸ್ವೀಕಾರಾರ್ಹ ಆದರೆ, ಹೈಕೋರ್ಟ್ ನ್ಯಾಯಮೂರ್ತಿಗಳು ಈ ರೀತಿ ಮಾಡುವುದು ಸರಿಯೇ ಎಂದು ಅಸಮಾಧಾನ ಹೊರಹಾಕಿದರು. ಈ ತೀರ್ಪುನಲ್ಲಿ ಹೈಕೋರ್ಟ್ ಮಾಡಿದ ತಪ್ಪನ್ನು ನಾವು ಮಾಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಒತ್ತಿ ಹೇಳಿತು.
ಅಂದಹಾಗೆ, ನಿನ್ನೆ ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಹಾಗೂ ನ್ಯಾ.ಮಹದೇವನ್ ಅವರಿದ್ದ ದ್ವಿಸದಸ್ಯ ಪೀಠ, ಸರ್ಕಾರ ಹಾಗೂ ದರ್ಶನ ಪರ ವಕೀಲರ ವಾದವನ್ನು ಆಲಿಸಿತು. ಬಳಿಕ ಎರಡೂ ಕಡೆಯ ವಕೀಲರಿಗೆ ಲಿಖಿತ ವಾದಾಂಶವನ್ನು ಸಲ್ಲಿಸಲು ಕೋರ್ಟ್ ಒಂದು ವಾರಗಳ ಗಡುವು ನೀಡಿದ್ದು, ಆ ಬಳಿಕ ತೀರ್ಪು ಪ್ರಕಟಿಸಲಿದೆ. 3 ಪುಟದೊಳಗೆ ಲಿಖಿತ ವಾದ ಸಲ್ಲಿಸಲು ನ್ಯಾಯಾಲಯ ಹೇಳಿದೆ.
ಸರ್ಕಾರದ ಪರ ಸಿದ್ಧಾರ್ಥ್ ಲೂತ್ರಾ ಹಾಗೂ ನಟ ದರ್ಶನ್ ಪರ ಸಿದ್ಧಾರ್ಥ್ ದವೆ ವಾದ ಮಂಡನೆ ಮಾಡಿದರು. ಸಾಕ್ಷಿಗಳು, ಪ್ರತ್ಯಕ್ಷದರ್ಶಿಗಳ ಹೇಳಿಕೆ, ದರ್ಶನ್ ಹಾಗೂ ಪವಿತ್ರಾ ಗೌಡ ನಡುವಿನ ಸಂಬಂಧ ಹಾಗೂ ಕೊಲೆಗೆ ಕಾರಣವೇನು? ಮುಂತಾದ ವಿಚಾರಗಳ ಬಗ್ಗೆ ನ್ಯಾಯಾಲಯ ಪ್ರಶ್ನೆಗಳನ್ನು ಕೇಳಿತು. ಎರಡೂ ಕಡೆಯ ವಕೀಲರು ಪ್ರಬಲವಾಗಿ ವಾದ ಮಂಡನೆ ಮಾಡಿದ್ದು, ವಾದವನ್ನು ಆಲಿಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ. ಸುಮಾರು 10 ದಿನಗಳ ಬಳಿಕ ಕೋರ್ಟ್ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.
ಕೊಲೆ ಕೇಸ್ನ ಆರೋಪಿಗಳಾದ ನಟ ದರ್ಶನ್, ಪವಿತ್ರಗೌಡ, ಪ್ರದೂಶ್, ಲಕ್ಷ್ಮಣ್, ನಾಗರಾಜು ಹಾಗೂ ಅನುಕುಮಾರ್ ಸೇರಿದಂತೆ 7 ಪ್ರಮುಖ ಆರೋಪಿಗಳಿಗೆ ಕಳೆದ(2024) ಡಿಸೆಂಬರ್ 13ರಂದು ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ಸರ್ಕಾರದ ಪರ ನಗರ ಪೊಲೀಸರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಸುದೀರ್ಘ ವಾದ-ವಿವಾದ ಪರಿಶೀಲಿಸಿದ ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ.
2024ರ ಜೂನ್ 8ರಂದು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆಯಾಗಿತ್ತು. ಈ ಹತ್ಯೆಯ ಕೇಸ್ನಲ್ಲಿ ನಟ ದರ್ಶನ್ ಸೇರಿದಂತೆ 17 ಮಂದಿಯನ್ನು ಬಂಧಿಸಲಾಗಿತ್ತು. 6 ತಿಂಗಳ ಬಳಿಕ ಪ್ರಕರಣದ ಎಲ್ಲಾ ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ನೀಡಿತ್ತು.