ಸಿನಿವಾಣಿ

ರಾಜ್​ ಚಿತ್ರದ ನಟಿ ನಿಶಾ ಕೊಠಾರಿ ಈಗ ಹೇಗಿದ್ದಾರೆ? ಎಲ್ಲಿದ್ದಾರೆ? ಏನ್​ ಮಾಡ್ತಿದ್ದಾರೆ ಗೊತ್ತಾ? ಇಲ್ಲಿದೆ ಮಾಹಿತಿ…

ಬೆಂಗಳೂರು: ದಿವಂಗತ ನಟ ಪುನೀತ್​ ರಾಜ್​ಕುಮಾರ್​ ಅಭಿನಯದ ರಾಜ್​ ದಿ ಶೋಮ್ಯಾನ್ ಚಿತ್ರದಲ್ಲಿ ನಟಿಸುವ ಮೂಲಕ ನಟಿ ನಿಶಾ ಕೊಠಾರಿ ಕನ್ನಡಿಗರಿಗೂ ಪರಿಚಿತರಾದರು. ಆದರೆ, ಕನ್ನಡದಲ್ಲಿ ಹೇಳಿಕೊಳ್ಳುವಷ್ಟು ಯಶಸ್ಸು ಸಿಗಲಿಲ್ಲ. ಹೀಗಾಗಿ ಬಂದಷ್ಟೇ ವಾಗವಾಗಿ ಕನ್ನಡ ಚಿತ್ರರಂಗದಿಂದ ನಿಶಾ ಕೊಠಾರಿ ಮಾಯವಾದರು.

ನಿಶಾ ಕೊಠಾರಿ ಅವರನ್ನು ಪ್ರಿಯಾಂಕಾ ಕೊಠಾರಿ ಅಂತಾನೂ ಕರೆಯಲಾಗುತ್ತದೆ. ಕನ್ನಡದಲ್ಲಿ ರಾಜ್​ ದಿ ಶೋಮ್ಯಾನ್​ ಹೊರತುಪಡಿಸಿದರೆ, ದಂಡುಪಾಳ್ಯ, ಯಾರಾದ್ರೆ ನನಗೇನು ಮತ್ತು ಬುಲೆಟ್​ ರಾಣಿ ಸಿನಿಮಾದಲ್ಲಿ ನಟಿಸಿದರು. ಆದರೆ, ಯಾವ ಸಿನಿಮಾ ಕೂಡ​ ನಿಶಾ ಕೈ ಹಿಡಿಯಲಿಲ್ಲ. ಆದರೆ, ರಾಜ್​ ಸಿನಿಮಾದ ಹೇ... ಹೇ ಪಾರು ಹಾಡಿನ ಮೂಲಕ ಇಂದಿಗೂ ಆಗಾಗ ಕನ್ನಡಿಗರನ್ನೂ ಕಾಡುತ್ತಿರುತ್ತಾರೆ.

ತಮಿಳಿನ ಸರಣ್ ನಿರ್ದೇಶನದಲ್ಲಿ ಮೂಡಿಬಂದ ಹಾಗೂ 2003ರಲ್ಲಿ ತೆರೆಕಂಡು ಮಾಧವನ್​ ನಟನೆಯ ಜೆಜೆ ಸಿನಿಮಾ ಮೂಲಕ ನಿಶಾ ಬಣ್ಣದ ಜಗತ್ತಿಗೆ ಕಾಲಿಟ್ಟರು. ಆದರೆ, ತಮಿಳಿನಲ್ಲೂ ಹೇಳಿಕೊಳ್ಳುವಷ್ಟು ಯಶಸ್ಸು ಸಿಗಲಿಲ್ಲ. ಬಳಿಕ ತೆಲುಗು ಮತ್ತು ಹಿಂದಿಯಲ್ಲಿ ಕೆಲ ಸಿನಿಮಾಗಳಲ್ಲಿ ನಟಿಸಿದರು.

2005ರಲ್ಲಿ ಸರ್ಕಾರ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅದೇ ವರ್ಷ ರಾಮ್ ಗೋಪಾಲ್ ವರ್ಮಾ ಮತ್ತು ರೋಹಿತ್ ಜುಗ್ರಾಜ್ ನಿರ್ದೇಶನದ ಜೇಮ್ಸ್‌ನಲ್ಲಿ ಕಾಣಿಸಿಕೊಂಡರು. ಇದರ ನಂತರ ರಾಮ್ ಗೋಪಾಲ್ ವರ್ಮಾ ಅವರ ಶಿವ, ಡರ್ನಾ ಜರೂರಿ ಹೈ, ಡಾರ್ಲಿಂಗ್ ಮತ್ತು ಅಜ್ಞಾತ್ ಮುಂತಾದ ಕೆಲವು ಚಿತ್ರಗಳಲ್ಲಿ ನಿಯಮಿತವಾಗಿ ಕಾಣಿಸಿಕೊಂಡರು. 2016 ರಲ್ಲಿ ತೆರೆಕಂಡ ಬುಲೆಟ್ ರಾಣಿ ಚಿತ್ರದ ನಂತರ ಬಣ್ಣದ ಜಗತ್ತಿನಿಂದ ನಿಶಾ ವಿರಾಮ ತೆಗೆದುಕೊಂಡರು. ಇದಾದ ಬಳಿಕ 2023ರಲ್ಲಿ ತೆರೆಕಂಡ ತೆಲುಗಿನ ಅಲ ಇಲ್ಲಾ ಎಲ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರು. ಸಿನಿಮಾ ಕ್ಷೇತ್ರ ಕೈಹಿಡಿಯದಿದ್ದರಿಂದ ನಿಶಾ ಅವರು ಇದೀಗ ಸಿನಿಮಾದಿಂದ ಅಂತರ ಕಾಯ್ದುಕೊಂಡಿದ್ದಾರೆ.

ಅಂದಹಾಗೆ ನಿಶಾ ಅವರು ಮದುವೆಯಾಗಿ, ದೆಹಲಿಯಲ್ಲಿ ನೆಲೆಸಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ನಿಶಾ ಅವರು ಮದುವೆಯಾಗಿ 7 ವರ್ಷಗಳೇ ಕಳೆದಿವೆ. ಆದರೆ, ಆಕೆ ಪ್ರೇಮವಿವಾಹ ಮಾಡಿಕೊಂಡಿದ್ದಾರೋ ಅಥವಾ ಕುಟುಂಬವೇ ನಿಶ್ಚಯಿಸಿದ್ದಾರೋ ಎಂಬುದು ತಿಳಿದುಬಂದಿಲ್ಲ. (ಏಜೆನ್ಸೀಸ್​)