ಸಿನಿವಾಣಿ

ರಶ್ಮಿಕಾ ಮಂದಣ್ಣ ಹೇಳಿಕೆಗೆ ಬಾಲಿವುಡ್ ನೆಲದಲ್ಲೇ ನಿಂತು ಖಡಕ್​ ತಿರುಗೇಟು ನೀಡಿದ ರೀಷ್ಮಾ ನಾಣಯ್ಯ! Rashmika Mandanna

Rashmika Mandanna : ಕೊಡವ ಸಮುದಾಯದಿಂದ ಸಿನಿಮಾ ರಂಗಕ್ಕೆ ಬಂದ ಮೊದಲ ನಟಿ ನಾನೇ ಎನ್ನುವ ಮೂಲಕ ಇತ್ತೀಚೆಗೆ ರಶ್ಮಿಕಾ ಮಂದಣ್ಣ ಹೊಸ ವಿವಾದ ಹುಟ್ಟು ಹಾಕಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ರಶ್ಮಿಕಾ ಹೇಳಿಕೆಗೆ ಎಲ್ಲೆಡೆ ಭಾರಿ ಆಕ್ರೋಶ ವ್ಯಕ್ತವಾಯಿತು. ಸಾಮಾಜಿಕ ಜಾಲತಾಣದಲ್ಲಂತೂ ಸಿಕ್ಕಾಪಟ್ಟೆ ಚರ್ಚೆಯಾಗಿ, ಟೀಕೆಗಳ ಸುರಿಮಳೆಯಾಯಿತು.

ಕೊಡವ ಸಮಾಜದಿಂದ ಈಗಾಗಲೇ ಅನೇಕ ಮಂದಿ ಚಿತ್ರರಂಗಕ್ಕೆ ಬಂದಿದ್ದಾರೆ. ಅದರಲ್ಲೂ ಹಿರಿಯ ನಟಿ ಪ್ರೇಮಾ ಅವರನ್ನು ಮರೆಯುವಂತಿಲ್ಲ. ಪ್ರೇಮಾ ಮಾತ್ರವಲ್ಲದೆ, ಡೈಸಿ ಬೊಪ್ಪಣ್ಣ, ನಿಧಿ ಸುಬ್ಬಯ್ಯ, ಹರ್ಷಿಕಾ ಪೂಣಚ್ಚ ಹಾಗೂ ಕೃಷಿ ತಾಪಂಡ ಸೇರಿದಂತೆ ಅನೇಕ ನಟಿಯರು ಚಿತ್ರರಂಗದಲ್ಲಿದ್ದಾರೆ. ಆದರೆ, ಕೊಡವ ಸಮಾಜದಿಂದ ಬಂದಿದ್ದು ನಾನೇ ಮೊದಲಿಗಳು ಎನ್ನುವ ಮೂಲಕ ರಶ್ಮಿಕಾ, ವಿವಾದ ಹುಟ್ಟುಹಾಕಿದ್ದಾರೆ. ಯಶಸ್ಸು ನೆತ್ತಿಗೆ ಏರಿದಾಗ ಇಂತಹ ಮಾತುಗಳು ಬರುವುದು ಸಹಜ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.

ರಶ್ಮಿಕಾ ಹೇಳಿಕೆಗೆ ಈಗಾಗಲೇ ಅನೇಕ ಕಲಾವಿದರು ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ಆ ಸಾಲಿಗೆ ಕೆಡಿ ಸಿನಿಮಾದ ನಟಿ ರೀಷ್ಮಾ ನಾಣಯ್ಯ ಕೂಡ ಸೇರಿಕೊಂಡಿದ್ದಾರೆ. ಅಂದಹಾಗೆ, ರೀಷ್ಮಾ ಕೂಡ ಕೊಡಗಿನವರೇ. ನಾನು ಕೂಡ ಕೂರ್ಗ್​ ಹುಡುಗಿ ಎನ್ನುವ ಮೂಲಕ ರಶ್ಮಿಕಾ ಟಾಂಗ್​ ಕೊಟ್ಟಿದ್ದಾರೆ.

ನಿನ್ನೆಯಷ್ಟೇ ಕೆಡಿ ಚಿತ್ರದ ಟೀಸರ್​ ಬಿಡುಗಡೆಯಾಗಿರುವುದು ನಿಮಗೆಲ್ಲರಿಗೂ ತಿಳಿದಿದೆ. ಮುಂಬೈಗೆ ಭೇಟಿ ನೀಡಿದ ಚಿತ್ರತಂಡ ಅಲ್ಲಿ ಅದ್ಧೂರಿ ಸಮಾರಂಭದಲ್ಲಿ ಕೆಡಿ ಚಿತ್ರದ ಟೀಸರ್​ ಬಿಡುಗಡೆ ಮಾಡಿತು. ಟೀಸರ್​ಗೆ ಉತ್ತಮ ಪ್ರತಿಕ್ರಿಯೆಗಳು ಬರುತ್ತಿವೆ. ಈ ಸಮಾರಂಭದಲ್ಲಿ ನಿರ್ದೇಶಕ ಪ್ರೇಮ್​, ನಾಯಕ ಧೃವ ಸರ್ಜಾ, ನಟಿ ರೀಷ್ಮಾ ನಾಣಯ್ಯ, ಬಾಲಿವುಡ್​ ನಟ ಸಂಜಯ್​ ದತ್​ ಮತ್ತು ಬಾಲಿವುಡ್​ ಬ್ಯೂಟಿ ಹಾಗೂ ಕನ್ನಡತಿ ಶಿಲ್ಪಾ ಶೆಟ್ಟಿ ಕೂಡ ಭಾಗವಹಿಸಿದ್ದರು. ತುಂಬಾ ವರ್ಷಗಳ ಬಳಿಕ ಶಿಲ್ಪಾ ಶೆಟ್ಟಿ ಅವರು ಕೆಡಿ ಸಿನಿಮಾ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ.

ಈ ಸಮಾರಂಭದಲ್ಲಿ ಮಾತನಾಡಿದ ರೀಷ್ಮಾ ನಾಣಯ್ಯ, ರಶ್ಮಿಕಾ ಮಂದಣ್ಣಾಗೆ ಟಾಂಗ್ ಕೊಟ್ಟರು. ಬಾಲಿವುಡ್ ನೆಲದಲ್ಲೇ ನಿಂತು ರಶ್ಮಿಕಾಗೆ ರೀಷ್ಮಾ ಖಡಕ್​ ತಿರುಗೇಟು ನೀಡಿದರು. ಕೆಡಿ ಸಿನಿಮಾ ಹಿಂದಿ ಭಾಷೆಯಲ್ಲೂ ಬರುತ್ತಿದೆ. ನಾನು ಕೂಡ ಕೂರ್ಗ್​ನಿಂದ ಬಂದಿದ್ದೇನೆ. ನಾನು ಕೂರ್ಗ್ ಹುಡುಗಿಯೆಂದು ಎರಡೆರಡು ಬಾರಿ ಒತ್ತಿ ಹೇಳುವ ಮೂಲಕ ರಶ್ಮಿಕಾಗೆ ರೀಷ್ಮಾ ತಿರುಗೇಟು ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.