ಕನ್ನಡದ ರಿಯಲ್ ಸ್ಟಾರ್ ನಟ ಉಪೇಂದ್ರ ಮತ್ತು ತೆಲುಗಿನ ಸೂಪರ್ ಹಿಟ್ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರು ಆ್ಯಕ್ಷನ್ ಕಟ್ ಹೇಳಿರುವ ತೆಲುಗಿನ 'ಸನ್ ಆಫ್ ಸತ್ಯಮೂರ್ತಿ' ಸಿನಿಮಾ ಸೂಪರ್ ಹಿಟ್ ಆಗಿದೆ. ಉಪ್ಪಿ ಈ ಚಿತ್ರದಲ್ಲಿ ದೇವರಾಜ್ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತೆಲುಗಿನಲ್ಲಿ ಈ ಸಿನಿಮಾದ ಮೂಲಕ ತಮಗೆ ಹಲವಾರು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. 'ಸನ್ ಆಫ್ ಸತ್ಯಮೂರ್ತಿ' ಸಿನಿಮಾದಲ್ಲಿ ಟಾಲಿವುಡ್ನ ಸ್ಟೈಲಿಶ್ ಸ್ಟಾರ್ ನಟ ಅಲ್ಲು ಅರ್ಜುನ್ ಹೀರೋ ಆಗಿ ಸಿಕ್ಕಾಪಟ್ಟೆ ಮಿಂಚಿದರು. ಅದರಲ್ಲಿಯೂ, ಅಲ್ಲು ಅರ್ಜುನ್ ಮತ್ತು ನಟ ಉಪೇಂದ್ರ ಅವರ ನಡುವಿನ ಒಂದೊಂದು ದೃಶ್ಯಗಳು ಕಂಡ ಅಭಿಮಾನಿಗಳು ದಿಲ್ ಖುಷ್ ಆಗಿದ್ದರು. ಅಂತಹ ಸಿನಿಮಾದ ನಂತರ ಈಗ ರಿಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಜೊತೆಗೆ ಮತ್ತೊಂದು ತೆಲುಗು ಸಿನಿಮಾ ಮಾಡಲಿದ್ದಾರೆ ಎಂಬ ಮಾಹಿತಿಗಳು ಹೊರಬಿದ್ದಿವೆ.
ಹೌದು, ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರು ತೆಲುಗಿನ ಸೂಪರ್ ಸ್ಟಾರ್ ನಟ ಪ್ರಿನ್ಸ್ ಮಹೇಶ್ ಬಾಬು ಅವರ ಜೊತೆಗೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗೆ, ನಟ ಮಹೇಶ್ ಬಾಬು ಮತ್ತು ತ್ರಿವಿಕ್ರಮ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಸಿನಿಮಾಗೆ '#SSMB28' ಎಂದು ಸದ್ಯಕ್ಕೆ ಹೆಸರಿಡಲಾಗಿದೆ. ಈ ಚಿತ್ರದ ಮುಹೂರ್ತ ಮತ್ತು ಹಲವು ಪೂಜಾ ಕಾರ್ಯಕ್ರಮಗಳು ನೆರವೇರಿವೆ. ಜತೆಗೆ, ಇದೇ ಏಪ್ರಿಲ್ ಆಂತ್ಯದಲ್ಲಿ ರೆಗ್ಯುಲರ್ ಶೂಟಿಂಗ್ ಪ್ರಾರಂಭವಾಗಲಿದೆ ಎಂಬ ಮಾಹಿತಿ ಇದೆ. ಪ್ರಸ್ತುತ ಸೂಪರ್ ಸ್ಟಾರ್ ಮಹೇಶ್ ಬಾಬು 'ಸರ್ಕಾರು ವಾರಿ ಪಾಟ' ಚಿತ್ರದ ಅಂತಿಮ ಶೂಟಿಂಗ್ನಲ್ಲಿ ಬ್ಯೂಸಿಯಾಗಿದ್ದು, ಅದನ್ನು ಮುಗಿಸಿದ ನಂತರ '#SSMB28' ಸಿನಿಮಾ ಶೂಟಿಂಗ್ ಆರಂಭವಾಗಲಿದೆ. ಹಾಗಾಗಿ, ನಟ ಮಹೇಶ್ ಬಾಬು ಅವರ ಹೊಸ ಸಿನಿಮಾ ಎಂದ ತಕ್ಷಣ ಅಭಿಮಾನಿಗಳಲ್ಲಿ ಆ ಚಿತ್ರದ ಸ್ಟಾರ್ ಕಾಸ್ಟ್ ಬಗ್ಗೆ ಸಾಕಷ್ಟು ತಿಳಿದುಕೊಳ್ಳಲು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಇರುತ್ತೆ.
ಈ ಹಿಂದೆ ಮಲಯಾಳಂ ಸೂಪರ್ ಸ್ಟಾರ್ ನಟ ಮೋಹನ್ ಲಾಲ್ ಜೊತೆಗೆ ತಮಿಳು ನಟ ವಿಜಯ್ ಸೇತುಪತಿ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದವು. ಇದೀಗ, ಮತ್ತೊಬ್ಬ ಸ್ಟಾರ್ ನಟ ಅಂದರೆ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರ ಹೆಸರು ಕೂಡಾ ಕೇಳಿಬರುತ್ತಿದೆ. ಅದರಲ್ಲಿಯೂ, ಸಿನಿಮಾದ ನಾಯಕ ನಟ ಮಹೇಶ್ ಬಾಬು ಅವರ ಅಣ್ಣನ ಪಾತ್ರದಲ್ಲಿ ನಟಿಸಲು ನಿರ್ದೇಶಕ ತ್ರಿವಿಕ್ರಮ್ ಅವರು ಉಪೇಂದ್ರ ಅವರ ಜೊತೆಗೆ ಮಾತುಕತೆ ನಡೆಸಿದ್ದಾರಂತೆ. ಹಾಗೆಯೇ, ನಟ ಉಪೇಂದ್ರ ಅವರು ಸಹ ಚಿತ್ರದಲ್ಲಿ ನಟಿಸಲು ಉತ್ಸಾಹ ತೋರಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಕುರಿತು ಶೀಘ್ರದಲ್ಲೇ ಅಧಿಕೃತವಾಗಿ ಘೋಷಣೆಯಾಗುತ್ತೆ ಎನ್ನಲಾಗಿದೆ. ನಟ ಉಪೇಂದ್ರ ಅವರ ಜತೆಗೆ ಮಾತ್ರವಲ್ಲಾ, ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರು ಮಹೇಶ್ ಬಾಬು ಅವರ ಜತೆಗೆ ಕೂಡಾ 'ಅತುಡು', 'ಖಲೇಜಾ' ಎಂಬ ಎರಡು ಸೂಪರ್ ಹಿಟ್ ಚಿತ್ರಗಳನ್ನು ಅಭಿಮಾನಿಗಳಿಗೆ ನೀಡಿದ್ದಾರೆ.
ಈಗ ಸುಮಾರು 11 ವರ್ಷಗಳ ನಂತರ ಮಹೇಶ್ ಅವರ ಜತೆಗೆ ತ್ರಿವಿಕ್ರಮ್ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ, ತ್ರಿವಿಕ್ರಮ್ ಶ್ರೀನಿವಾಸ್, ಮಹೇಶ್ ಬಾಬು, ಉಪೇಂದ್ರ ಅವರ ಈ ಕ್ರೇಜಿ ಕಾಂಬಿನೇಷನ್ನ ಸಿನಿಮಾ ಒಂದು ಬಹುನಿರೀಕ್ಷಿತ ಸಿನಿಮಾ ಎನ್ನಬಹುದು. ಅಂದಹಾಗೆ, ಹಾರಿಕಾ & ಹಾಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ '#SSMB28' ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಸಿನಿಮಾದ ಮತ್ತೊಂದು ಹೈಲೈಟ್ ಅಂದರೆ ಅದು ಮಹೇಶ್‌ಗೆ ಹೀರೋಯಿನ್ ಆಗಿ ಟಾಲಿವುಡ್ನ ಬುಟ್ಟ ಬೊಮ್ಮ ನಟಿ ಪೂಜಾ ಹೆಗಡೆ ಅಭಿನಯಿಸಲಿದ್ದಾರೆ. ಇನ್ನು, ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಅವರು '#SSMB28' ಸಿನಿಮಾದ ಬಳಿಕ ಎಸ್.ಎಸ್.ರಾಜಮೌಳಿ ಅವರ ಭಾರಿ ಬಜೆಟ್ಟಿನ ಚಿತ್ರದಲ್ಲಿ ನಟಿಸಲಿದ್ದಾರೆ. ಹೌದು, ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರ '#SSMB28' ಪೂರ್ಣಗೊಂಡ ಒಂದು ವರ್ಷ ಕಾಲದ ನಂತರ ನಟ ಮಹೇಶ್ ಬಾಬು ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಸಿನಿಮಾಗೆ ಕಾಲ್ ಶೀಟ್ ನೀಡಿದ್ದಾರೆ ಎನ್ನಲಾಗಿದೆ.