ಮರಳುಗಾಡಿನಲ್ಲಿ ಓಯಸಿಸ್... ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ತುಂಬಿಸುತ್ತಿರುವ​ ‘ಪ್ರೇಮದ ಊರಲಿ’ ಬಗ್ಗೆ ಉಪ್ಪಿ ಗುಣಗಾನ​ 
ಸಿನಿವಾಣಿ

ಮರಳುಗಾಡಿನಲ್ಲಿ ಓಯಸಿಸ್... ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ತುಂಬಿಸುತ್ತಿರುವ​ ‘ಪ್ರೇಮದ ಊರಲಿ’ ಬಗ್ಗೆ ಉಪ್ಪಿ ಗುಣಗಾನ​ | Premada Oorali

ಪ್ರೇಕ್ಷಕರ ಜತೆಗೆ ಚಿತ್ರರಂಗದ ಗಣ್ಯರೂ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದು, ಇದೀಗ ನಟ ಉಪೇಂದ್ರ ಅವರು ನಿರ್ದೇಶಕ ಮನೋಜ್ ಕುಮಾರ್ ಅವರಿಗೆ ದೂರವಾಣಿ ಕರೆ ಮೂಲಕ ಮನಸಾರೆ ಚಿತ್ರಕ್ಕೆ ಮೆಚ್ಚುಗೆ, ಅಭಿನಂದನೆ ತಿಳಿಸಿದ್ದಾರೆ.

ಬೆಂಗಳೂರು: ಪ್ರಸ್ತುತ, ಚಿತ್ರಮಂದಿರಗಳಲ್ಲಿ ಮತ್ತು ಕರ್ನಾಟಕ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿರುವ ಕನ್ನಡದ ಒಂದು ಸರಳ ಕಥೆಯ ಸಿಂಪಲ್​ ಸಿನಿಮಾ ಇದೀಗ ಭಾರತೀಯ ಚಿತ್ರೋದ್ಯಮವನ್ನೇ ತಿರುಗಿ ನೋಡುವಂತೆ ಮಾಡಿದೆ. ತನ್ನ ಮಧುರ ಪ್ರೇಮ ಕಥೆಯಿಂದಲೇ ಸಿನಿಪ್ರಿಯರ ಮೆಚ್ಚುಗೆ, ಪ್ರಶಂಸೆಯನ್ನು ಗಳಿಸಿ, ನಿರೀಕ್ಷೆಗೂ ಮೀರಿದ ಜನಸಂಖ್ಯೆಯನ್ನು ಚಿತ್ರಮಂದಿರಗಳಿಗೆ ಕರೆತರುವಲ್ಲಿ ಸಿನಿಮಾ ಅತ್ಯಂತ ಯಶಸ್ವಿಯಾಗಿದ್ದು, ಇಡೀ ಚಿತ್ರತಂಡ ಸಂತಸದಲ್ಲಿದೆ. ಇದು ಕನ್ನಡ ಚಿತ್ರರಂಗಕ್ಕೆ ಹೊಸ ಮೈಲಿಗಲ್ಲು ತಂದುಕೊಟ್ಟಿರುವುದು ನಿಜಕ್ಕೂ ಖುಷಿ ಸಂಗತಿ. ಮತ್ತೊಂದೆಡೆ, ಚಿತ್ರವನ್ನು ನೋಡಿದ ರಿಯಲ್​ ಸ್ಟಾರ್, ನಟ ಉಪೇಂದ್ರ ಯುವ ತಂಡದ ಕೆಲಸವನ್ನು ಕೊಂಡಾಡಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮನೋಜ್‌ ಕುಮಾರ್‌ ನಿರ್ದೇಶನದಲ್ಲಿ ಹಾಗೂ ವೆನಿಲ್ಲಾ ಎಂಟರ್‌ಟೇನ್‌ಮೆಂಟ್‌ ಸಂಸ್ಥೆಯ ನಿರ್ಮಾಣದಲ್ಲಿ ಮೂಡಿಬಂದಿರುವ ‘ಪ್ರೇಮದ ಊರಲಿ’ ಚಿತ್ರವು ರಾಜ್ಯದ ಬಾಕ್ಸ್‌ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್‌ ಹಿಟ್‌ ಆಗಿ ಯಶಸ್ಸು ಕಂಡಿದ್ದು, ಇಂದಿಗೂ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಪ್ರೇಕ್ಷಕರ ಜತೆಗೆ ಚಿತ್ರರಂಗದ ಗಣ್ಯರೂ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದು, ಇದೀಗ ನಟ ಉಪೇಂದ್ರ ಅವರು ನಿರ್ದೇಶಕ ಮನೋಜ್ ಕುಮಾರ್ ಅವರಿಗೆ ದೂರವಾಣಿ ಕರೆ ಮೂಲಕ ಮನಸಾರೆ ಚಿತ್ರಕ್ಕೆ ಮೆಚ್ಚುಗೆ, ಅಭಿನಂದನೆ ತಿಳಿಸಿದ್ದಾರೆ.

"ಚಿತ್ರದ ಮೇಕಿಂಗ್ ಹಾಗೂ ನಿರ್ದೇಶಕರ ಪರಿಶ್ರಮವನ್ನು ಮೆಚ್ಚಿದ ಉಪೇಂದ್ರ, ನಿಮ್ಮ ಸಿನಿಮಾ ಪ್ರೇಮದ ಊರಲಿ ನೋಡಿದೆ. ನಿಜಕ್ಕೂ ಅದ್ಭುತವಾಗಿದೆ. ನಿಮ್ಮ ಜತೆ ಎಷ್ಟು ಮಾತನಾಡಬೇಕು ಅನಿಸುತ್ತಿದೆ ಅಂದ್ರೆ, ನಿಮಗೆ ಯಾವಾಗಲಾದರೂ ಬಿಡುವಿದ್ದಾಗ ಖುದ್ದಾಗಿ ಭೇಟಿಯಾಗಿ ವೈಯಕ್ತಿಕವಾಗಿ ಮಾತನಾಡಬೇಕು ಅನಿಸಿದೆ. ಈ ಚಿತ್ರದ ಯಶಸ್ಸಿನಿಂದ ನೀವಿಗ ತುಂಬಾ ಬಿಡುವಿಲ್ಲದೆ ಇರುತ್ತೀರಿ ಎಂದು ಗೊತ್ತು. ಇರಲಿ ಪರವಾಗಿಲ್ಲ, ನಿಮಗೆ ಸಮಯ ಸಿಕ್ಕಾಗ ನನ್ನ ನಂಬರ್‌ಗೆ ಕರೆ ಮಾಡಿ. ನಿಮ್ಮನ್ನು ನೇರವಾಗಿ ಭೇಟಿಯಾಗಿ, ತಬ್ಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಬೇಕು ಎಂಬ ಆಸೆಯಿದೆ" ಎಂದರು.

"ನಿಮ್ಮ ಚಿತ್ರದಲ್ಲಿನ ಪ್ರತಿಯೊಂದು ಪಾತ್ರಗಳು, ಚಿತ್ರಕಥೆ, ಒಂದೊಂದು ಸಂಭಾಷಣೆ ಹಾಗೂ ಸಂಗೀತ ಎಲ್ಲವೂ ಅಚ್ಚುಕಟ್ಟಾಗಿ ಮೂಡಿಬಂದಿದೆ. ಎಲ್ಲಿಯೂ ಯಾವುದೇ ಲೋಪದೋಷವೇ ಕಾಣದ ಅದ್ಭುತ ಸಿನಿಮಾ ಇದಾಗಿದೆ. ಕನ್ನಡ ಚಿತ್ರರಂಗಕ್ಕೆ ಇಂತಹದೊಂದು ಸುಂದರ, ಕಾವ್ಯಾತ್ಮಕ ಹಾಗೂ ಅಸಾಧಾರಣ ಕೃತಿ ನೀಡಿದ್ದಕ್ಕಾಗಿ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ನನಗೆ ಈ ಸಿನಿಮಾ ನೋಡಿದಾಗ ಮರಳುಗಾಡಿನಲ್ಲಿ ಓಯಸಿಸ್ ಕಂಡಂತಾಯಿತು. ಈ ಚಿತ್ರಕಥೆ ಮತ್ತು ನಿಮ್ಮ ನಿರ್ದೇಶನದ ಶೈಲಿ ನೋಡಿದರೆ ನಿಮಗೆ ಚಿತ್ರರಂಗದಲ್ಲಿ ಉಜ್ವಲ ಭವಿಷ್ಯವಿದೆ ಹಾಗೂ ನೀವು ದೊಡ್ಡ ನಿರ್ದೇಶಕರಾಗುತ್ತೀರಿ ಎಂಬ ವಿಶ್ವಾಸ ನನಗಿದೆ" ಎಂದು ಮೆಚ್ಚಿ ಮಾತನಾಡಿದ್ದಾರೆ.