ಸಿನಿವಾಣಿ

ನ. 25ಕ್ಕೆ ಬರಲಿದೆ ಬಿಡುಗಡೆಯಾಗಲಿದೆ ಪವನ್​ ಒಡೆಯರ್​ ನಿರ್ದೇಶನದ 'ರೆಮೋ'

ಬೆಂಗಳೂರು: ಪವನ್​ ಒಡೆಯರ್ ನಿರ್ದೇಶನದಲ್ಲಿ ಇಶಾನ್​ ಮತ್ತು ಆಶಿಕಾ ರಂಗನಾಥ್​ ಅಭಿನಯಿಸಿರುವ 'ರೆಮೋ' ಚಿತ್ರದ ಚಿತ್ರೀಕರಣ ಮುಗಿದು ಹಲವು ದಿನಗಳೇ ಆಗಿವೆ. ಕಾರಣಾಂತರಗಳಿಂದ ಸ್ವಲ್ಪ ವಿಳಂಬವಾಗಿ ಈಗ ಚಿತ್ರ ಕೊನೆಗೂ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರವು ನವೆಂಬರ್​ 25ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಕುರಿತು ಮಾತನಾಡಿರುವ ನಿರ್ದೇಶಕ ಪವನ್​ ಒಡೆಯರ್​, 'ನಾನು ಮೊದಲ ಬಾರಿ ಇಶಾನ್ ಅವರನ್ನು ಭೇಟಿ ಮಾಡಿದ್ದು ದುಬೈನಲ್ಲಿ. ಇಷ್ಟು ಚೆನ್ನಾಗಿದ್ದಾರೆ, ಅವರನ್ನು ಹೀರೋ ಮಾಡಿ ಸಿನಿಮಾ ಮಾಡಬೇಕು ಅಂದುಕೊಂಡೆ. ನಂತರ 'ರೆಮೋ' ಚಿತ್ರದ ಕಥೆ ಬರೆದೆ. 2019ರಲ್ಲಿ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಯಿತು. ಆನಂತರ ಹೈದರಾಬಾದ್, ಜಮ್ಮು-ಕಾಶ್ಮೀರ, ಸೌತ್ ಆಫ್ರಿಕಾ, ಸಿಂಗಾಪುರ ಮುಂತಾದ ಕಡೆ ಚಿತ್ರೀಕರಣ ನಡೆಸಲಾಯಿತು. ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ. ಮ್ಯಾಜಿಕಲ್‌ ಕಂಪೋಸರ್ ಅರ್ಜುನ್ ಜನ್ಯ ಅವರು ಸಂಗೀತ ನೀಡಿರುವ ಆರು ಅದ್ಭುತ ಹಾಡುಗಳು ಈ ಚಿತ್ರದಲ್ಲಿದೆ ಎನ್ನುತ್ತಾರೆ ಪವನ್ ಒಡೆಯರ್​.

'ಇಶಾನ್ - ಆಶಿಕಾ ರಂಗನಾಥ್ ಅವರ ಸುಂದರ ಜೋಡಿಯನ್ನು ತೆರೆಯ ಮೇಲೆ ನೋಡಿದವರು ಫಿದಾ ಆಗುವುದು ಖಂಡಿತಾ. ವೈದಿ ಅವರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವು 'ರೆಮೋ' ಚಿತ್ರದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು. ಸದ್ಯದಲ್ಲೇ ಲಿರಿಕಲ್ ಸಾಂಗ್, ಒಂದು ವಿಡಿಯೋ ಸಾಂಗ್ ಮತ್ತು ಟ್ರೇಲರ್ ಬಿಡುಗಡೆ ಮಾಡುತ್ತೇವೆ' ಎನ್ನುತ್ತಾರೆ ಪವನ್​.

'ರೆಮೋ' ಚಿತ್ರದಲ್ಲಿ ಪರಿಶುದ್ಧ ಪ್ರೇಮಕಥೆಯೊಂದಿಗೆ ಭಾವನಾತ್ಮಕ ಸನ್ನಿವೇಶಗಳು ಸಹ ಹೈಲೈಟ್​ ಅಂತೆ. ಚಿತ್ರವನ್ನು ಸಿ.ಆರ್​. ಮನೋಃರ್​ ನಿರ್ಮಿಸಿದ್ದಾರೆ.