ಬೆಂಗಳೂರು: ಧ್ರುವ ಸರ್ಜಾ ಅಭಿನಯದ ಹೊಸ ಚಿತ್ರದ ಮುಹೂರ್ತ ಆಗಸ್ಟ್ 15ರಂದು ನಡೆಯಲಿದೆ. ಅದೇ ದಿನ ಚಿತ್ರದ ಹೆಸರು ಮತ್ತು ಫಸ್ಟ್ಲುಕ್ ಬಿಡುಗಡೆಯಾಗಲಿದೆ. ಈ ಮಧ್ಯೆ, ಸೋಷಿಯಲ್ ಮೀಡಿಯಾದಲ್ಲಿ ರವಿಚಂದ್ರನ್ ಅವರ ಜತೆಗೆ ಧ್ರುವ ಮತ್ತು ನಿರ್ವಪಕ ಉದಯ್ ಮೆಹ್ತಾ ಇರುವ ಫೋಟೋವೊಂದು ಹರಿದಾಡುತ್ತಿದೆ. ಈ ಫೋಟೋ ನೋಡಿದವರೆಲ್ಲರೂ, ಹೊಸ ಚಿತ್ರದಲ್ಲಿ ರವಿಚಂದ್ರನ್ ಸಹ ಅಭಿನಯಿಸುತ್ತಿದ್ದಾರಾ ಎಂಬ ಪ್ರಶ್ನೆ ಕೇಳುತ್ತಿದ್ದಾರೆ.
ಇದೇ ಪ್ರಶ್ನೆಯನ್ನು ಉದಯ್ ಮೆಹ್ತಾ ಅವರ ಮುಂದಿಟ್ಟರೆ, ಚಿತ್ರದಲ್ಲಿ ರವಿಚಂದ್ರನ್ ಅವರು ನಟಿಸುತ್ತಿಲ್ಲ ಎಂಬ ಸ್ಪಷ್ಟ ಉತ್ತರ ಬರುತ್ತದೆ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು, ‘ನಮ್ಮ ಚಿತ್ರದ ಮುಹೂರ್ತಕ್ಕೆ ಅವರನ್ನು ಆಹ್ವಾನಿಸುವುದಕ್ಕೆ ಹೋಗಿದ್ದೆವು. ಮೊದಲ ದೃಶ್ಯಕ್ಕೆ ಅವರು ಕ್ಲಾಪ್ ಮಾಡಬೇಕು ಎಂಬುದು ನಮ್ಮ ಆಸೆ. ಚಿತ್ರೀಕರಣದಿಂದ ಬಿಡುವು ಸಿಕ್ಕರೆ, ಖಂಡಿತ ಬರುವುದಾಗಿ ಅವರು ಹೇಳಿದ್ದಾರೆ’ ಎನ್ನುತ್ತಾರೆ ಉದಯ್ ಮೆಹ್ತಾ.
ಇದಕ್ಕೂ ಮುನ್ನ, ಧ್ರುವ ಅಭಿನಯದ ‘ಬಹದ್ದೂರ್’ ಚಿತ್ರದ ಮುಹೂರ್ತದಲ್ಲೂ ರವಿಚಂದ್ರನ್ ಭಾಗವಹಿಸಿ ಚಿತ್ರತಂಡಕ್ಕೆ ಶುಭಕೋರಿದ್ದರು ಎನ್ನುವುದು ವಿಶೇಷ. ಧ್ರುವ ಅಭಿನಯದ ಈ ಹೊಸ ಚಿತ್ರವನ್ನು ಎ.ಪಿ. ಅರ್ಜುನ್ ನಿರ್ದೇಶಿಸುತ್ತಿದ್ದಾರೆ. ಮಿಕ್ಕ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು, ಆಗಸ್ಟ್ 15ರಂದು ಚಿತ್ರ ಘೋಷಣೆಯಾಗಲಿದೆ.