ಸಿನಿವಾಣಿ

ಇನ್ನೊಂದು ಹೊಸ ಥ್ರಿಲ್ಲರ್​ನಲ್ಲಿ ರವಿಚಂದ್ರನ್​; ಏಪ್ರಿಲ್​ನಲ್ಲಿ ಚಿತ್ರ ಪ್ರಾರಂಭ

chetannadiger

ಬೆಂಗಳೂರು: 'ದೃಶ್ಯ', 'ಆ ದೃಶ್ಯ', 'ರವಿ ಬೋಪಣ್ಣ' ಮುಂತಾದ ಥ್ರಿಲ್ಲರ್​ ಚಿತ್ರಗಳ ನಂತರ ರವಿಚಂದ್ರನ್​, ಈಗ ಇನ್ನೊಂದು ಹೊಸ ಥ್ರಿಲ್ಲರ್​ನಲ್ಲಿ ನಟಿಸುವುದಕ್ಕೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ಈ ಬಾರಿ ಅವರು ಲೀಗಲ್​ ಥ್ರಿಲ್ಲರ್​ನಲ್ಲಿ ನಟಿಸುತ್ತಿದ್ದಾರೆ ಎನ್ನುವುದು ವಿಶೇಷ.

ಈ ಹಿಂದೆ ರಮೇಶ್​ ಅರವಿಂದ್​ ನಿರ್ದೇಶನದ 'ಆಕ್ಸಿಡೆಂಟ್​', 'ಲಾಸ್ಟ್​ ಬಸ್​', 'ಅಮೃತ್​ ಅಪಾರ್ಟ್​ಮೆಂಟ್ಸ್​' ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದ ಜಿ9 ಕಮ್ಯುನಿಕೇಶನ್ ಮೀಡಿಯ ಅಂಡ್ ಎಂಟರ್ಟೈಂಮೆಂಟ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, 'ಅಮೃತ್​ ಅಪಾರ್ಟ್​ಮೆಂಟ್ಸ್​' ನಿರ್ದೇಶಿಸಿದ್ದ ಗುರುರಾಜ ಕುಲಕರ್ಣಿ (ನಾಡಗೌಡ) ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆಯನ್ನೂ ರಚಿಸಿದ್ದಾರೆ.

'ಕನ್ನಡ ಚಿತ್ರಗಳ ಬಗ್ಗೆ ಎಲ್ಲೆಡೆ ಬೇಡಿಕೆ ಹಾಗು ಆಸಕ್ತಿ ಇರುವ ಈ ಸಮಯದಲ್ಲಿ, ತಮ್ಮ ಈ ಹೊಸ ಚಿತ್ರವು ಚಿತ್ರರಂಗಕ್ಕೆ ಇನ್ನಷ್ಟು ಮೆರುಗನ್ನು ತರಲಿದೆ' ಎಂಬ ವಿಶ್ವಾಸವನ್ನು ರವಿಚಂದ್ರನ್​ ವ್ಯಕ್ತಪಡಿಸಿದ್ದಾರೆ.

ಇದೊಂದು ದೊಡ್ಡ ಕ್ಯಾನ್ವಾಸ್​ನ ಚಿತ್ರವಾಗಿದ್ದು, ಹಲವು ಜನಪ್ರಿಯ ತಂತ್ರಜ್ನರು ಕೆಲಸ ಮಾಡುತ್ತಿದ್ದಾರೆ. ಅನೂಪ್​ ಸೀಳಿನ್​ ಸಂಗೀತ, ಬಿ.ಎಸ್​. ಕೆಂಪರಾಜು ಸಂಕಲನ, ಎಂ.ಎಸ್​. ರಮೇಶ್​ ಸಂಭಾಷಣೆ ಈ ಚಿತ್ರಕ್ಕಿದೆ. ಏಪ್ರಿಲ್​ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, ಚಿತ್ರದ ಶೀರ್ಷಿಕೆ ಸದ್ಯದಲ್ಲೇ ಘೋಷಣೆಯಾಗಲಿದೆ.