ಸಿನಿವಾಣಿ

ಹಳ್ಳಿಯತ್ತ ರವಿಮಾಮ; ಎಸ್. ಮಹೇಂದರ್ ನಿರ್ದೇಶನ

ಬೆಂಗಳೂರು: ‘ಕ್ರೇಜಿಸ್ಟಾರ್’ ರವಿಚಂದ್ರನ್ ಇತ್ತೀಚಿನ ಕೆಲ ವರ್ಷಗಳಿಂದ ಸಂಪೂರ್ಣ ಹಳ್ಳಿಗಾಡಿನ ಸಿನಿಮಾದಲ್ಲಿ ನಟಿಸಿಲ್ಲ. ಆದರೆ, ಅವರ ಸಿನಿಮಾ ಬತ್ತಳಿಕೆಯಲ್ಲಿ ಅಂಥ ಚಿತ್ರಗಳ ಸಂಖ್ಯೆಯೇ ಹೆಚ್ಚಿದೆ. ‘ಹಳ್ಳಿಮೇಷ್ಟ್ರು’, ‘ಅಣ್ಣಯ್ಯ’, ‘ಪುಟ್ನಂಜ’, ‘ರವಿಮಾಮ’, ‘ರಾಮಾಚಾರಿ’, ‘ಚಿಕ್ಕೆಜಮಾನ್ರು’.. ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಹೀಗಿರುವಾಗ ಇದೀಗ ಮತ್ತೆ ಹಳ್ಳಿಯತ್ತ ರವಿಚಂದ್ರನ್ ಮುಖ ಮಾಡಿದ್ದಾರೆ. ಅಂದರೆ, ಗ್ರಾಮ್ಯ ಸೊಗಡಿನ ಕಥೆ ಮೂಲಕ ಆಗಮಿಸುತ್ತಿದ್ದಾರೆ.

ಕೌಟುಂಬಿಕ ಪ್ರಧಾನ ಸಿನಿಮಾಗಳ ಮೂಲಕವೇ ಹೆಸರು ಮಾಡಿರುವ ಹಿರಿಯ ನಿರ್ದೇಶಕ ಎಸ್. ಮಹೇಂದರ್ ಮೊದಲ ಸಲ ರವಿಚಂದ್ರನ್​ಗೆ ಆಕ್ಷನ್ ಕಟ್ ಹೇಳಲಿದ್ದು, ಎಲ್ಲ ಅಂದುಕೊಂಡಂತೆ ಆಗಿದ್ದರೆ, ಏಪ್ರಿಲ್ ಮೊದಲ ವಾರದಿಂದ ಶೂಟಿಂಗ್ ಶುರುವಾಗಬೇಕಿತ್ತು. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಶೂಟಿಂಗ್ ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಹಾಗಾದರೆ ಚಿತ್ರದ ಕಥೆ ಏನು, ತಾರಾಗಣದಲ್ಲಿ ಯಾರೆಲ್ಲ ಇರಲಿದ್ದಾರೆ, ತಾಂತ್ರಿಕ ವರ್ಗ ಹೇಗಿದೆ ಈ ಎಲ್ಲ ಅಂಶಗಳ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಲಭ್ಯವಾಗಲಿದೆ.