ಸಿನಿವಾಣಿ

ಬಾಲಿವುಡ್​ಗೆ ಎಂಟ್ರಿ ಕೊಡುವುದಕ್ಕೆ ರೆಡಿಯಾಗಿದ್ದಾಳೆ ರವೀನಾ ಟಂಡನ್​ ಮಗಳು

ಮುಂಬೈ: ಒಂದು ಕಾಲಕ್ಕೆ ಬಾಲಿವುಡ್​ನ ಜನಪ್ರಿಯ ನಾಯಕಿಯರಲ್ಲಿ ರವೀನಾ ಟಂಡನ್​ ಸಹ ಒಬ್ಬರು. 90ರ ದಶಕದಲ್ಲಿ ಆಗಿನ ಹಲವು ಜನಪ್ರಿಯ ನಾಯಕರಾದ ಅಕ್ಷಯ್​ ಕುಮಾರ್​, ಅಜಯ್​ ದೇವಗನ್​, ಸಲ್ಮಾನ್​ ಖಾನ್​ ಸೇರಿದಂತೆ ಹಲವರೊಂದಿಗೆ ನಟಿಸಿದ್ದರು. ಮದುವೆಯಾಗಿ ಹಲವು ವರ್ಷಗಳ ಗ್ಯಾಪ್​ನ ನಂತರ ಮತ್ತೊಮ್ಮೆ 'ಕೆಜಿಎಫ್​ 2' ಸೇರಿದಂತೆ ಹಲವು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಂಡಿದ್ದರು.

ವಿಷಯ ಇರುವುದು ರವೀನಾ ಟಂಡನ್​ ಕುರಿತಲ್ಲ. ಅವರ ಮಗಳು ರಾಶಾ ಕುರಿತು. ಇದುವರೆಗೂ ಓದಿನಲ್ಲಿ ಬ್ಯುಸಿಯಾಗಿದ್ದ ರಾಶಾ, ಈಗ ಚಿತ್ರರಂಗದಲ್ಲಿ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಸದ್ಯದಲ್ಲೇ ಚಿತ್ರವೊಂದರಲ್ಲಿ ಅವರು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಂದಹಾಗೆ, ರಾಶಾ ನಾಯಕಿಯಾಗಿ ನಟಿಸುತ್ತಿರುವ ಮೊದಲ ಚಿತ್ರದ ಹೆಸರು ಬಹಿರಂಗವಾಗಿಲ್ಲ. ಈ ಚಿತ್ರದಲ್ಲಿ ಅಜಯ್​ ದೇವಗನ್​ ಸಂಬಂಧಿ ಅಮಾನ್​ ದೇವಗನ್​ ನಾಯಕನಾಗಿ ಬಾಲಿವುಡ್​ಗೆ ಪರಿಚಿತನಾಗುತ್ತಿದ್ದು, ಈ ಚಿತ್ರವನ್ನು ಅಭಿಷೇಕ್​ ಕಪೂರ್​ ನಿರ್ದೇಶನ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಅಜಯ್​ ದೇವಗನ್​ ಸಹ ಅತಿಥಿ ಕಂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಭಿಷೇಕ್​ ಕಪೂರ್ ಈ ಹಿಂದೆ ಫರ್ಹಾನ್​ ಅಖ್ತರ್​, ರಾಜ್​ಕುಮಾರ್​ ರಾವ್​, ಸಾರಾ ಅಲಿ ಖಾನ್​ ಮುಂತಾದವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ಅಭಿಷೇಕ್​ ಅವರಿಂದ ಪರಿಚಿತರಾದವರೆಲ್ಲ ಬಾಲಿವುಡ್​ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಈಗ ರಾಶಾ ಕೂಡಾ ಬಾಲಿವುಡ್​ನಲ್ಲಿ ದೊಡ್ಡ ಹೆಸರು ಮಾಡುತ್ತಾರಾ? ಎಂದು ಕಾದು ನೋಡಬೇಕಿದೆ.