ಸಿನಿವಾಣಿ

ದಕ್ಷಿಣ ಭಾರತಕ್ಕೆ ರಶ್ಮಿಕಾ ನಂ.1: ಇನ್​ಸ್ಟಾಗ್ರಾಂನಲ್ಲಿ ಹೊಸ ದಾಖಲೆ

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸದ್ದು ಮಾಡಿ ಬಾಲಿವುಡ್​ನಲ್ಲಿಯೂ ತಮ್ಮದೆ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ, ಇದೀಗ ಇನ್​ಸ್ಟಾಗ್ರಾಂನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಒಟ್ಟಾರೆ 1 ಕೋಟಿ 92 ಲಕ್ಷ (19.2 ಮಿಲಿಯನ್) ಫಾಲೋವರ್ಸ್ ಪಡೆಯುವ ಮೂಲಕ ದಕ್ಷಿಣ ಭಾರತದ ಖ್ಯಾತ ನಟಿಯರನ್ನು ರಶ್ಮಿಕಾ ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದಾರೆ. ಹಾಗಾದರೆ ಯಾವೆಲ್ಲ ನಟಿಯರು ಯಾವ ಸ್ಥಾನದಲ್ಲಿದ್ದಾರೆ ಎಂಬುದನ್ನು ನೋಡುವುದಾದರೆ, ಕಾಜಲ್ ಅಗರ್​ವಾಲ್ 1 ಕೋಟಿ 90 ಲಕ್ಷ , ಸಮಂತಾ 1 ಕೋಟಿ 75 ಲಕ್ಷ , ರಾಕುಲ್ ಪ್ರೀತ್ ಸಿಂಗ್ 1 ಕೋಟಿ 75 ಲಕ್ಷ, ಪೂಜಾ ಹೆಗ್ಡೆ 1 ಕೋಟಿ 45 ಲಕ್ಷ, ತಮನ್ನಾ ಭಾಟಿಯಾ 1 ಕೋಟಿ 35 ಲಕ್ಷ, ಕೀರ್ತಿ ಸುರೇಶ್ 98 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.

ಈ ಮೂಲಕ ಬೇರಾವ ನಟಿ ಮಾಡದ ಸಾಧನೆಯನ್ನು ಅತೀ ಕಡಿಮೆ ಸಮಯದಲ್ಲಿ ಮಾಡಿದ ಕೀರ್ತಿ ರಶ್ಮಿಕಾ ಅವರದ್ದು. 2016ರಲ್ಲಿ ‘ಕಿರಿಕ್ ಪಾರ್ಟಿ’ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ರಶ್ಮಿಕಾ, ಆ ಚಿತ್ರದ ಯಶಸ್ಸಿನಿಂದ, ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿ, ದಕ್ಷಿಣದ ಇತರ ಭಾಷೆಯ ಚಿತ್ರರಂಗಗಳಲ್ಲಿಯೂ ಮೋಡಿ ಮಾಡಿದ್ದಾರೆ, ಈಗಲೂ ಅದು ಮುಂದುವರಿಯುತ್ತಿದೆ. ಜತೆಗೆ ಬಾಲಿವುಡ್​ನಲ್ಲಿಯೂ ಎರಡು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.