ಸಿನಿವಾಣಿ

ತನ್ನ ಬಾಲ್ಯದ ಕ್ರಶ್ ವಿಜಯ್ ಜೊತೆ 'ದಳಪತಿ 66' ಸಿನಿಮಾದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ!

ಚೆನೈ: ಈಗ ತಾನೆ 'ಪುಷ್ಪ' ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ಯಶಸ್ಸನ್ನು ಕಂಡಿದೆ. ಆದರೆ, ಅಷ್ಟರೊಳಗೆ ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣಗೆ ಮತ್ತೆ ಅದೃಷ್ಟ ಕುಲಾಯಿಸಿದೆ. ಹೌದು, ಇತ್ತೀಚೆಗೆ ತಮಿಳು ನಟ ದಳಪತಿ ವಿಜಯ್ ತನ್ನ ಬಾಲ್ಯದ ಕ್ರಶ್ ಎಂದು ಮಾದ್ಯಮವೊಂದರಲ್ಲಿ ನ್ಯಾಷನಲ್ ಕ್ರಶ್ ಹೇಳಿಕೊಂಡಿದ್ರು. ಆದರೆ, ಇದೀಗ ತಮ್ಮ ಬಾಲ್ಯದ ಕ್ರಶ್ ಜೊತೆಗೆಯೇ ಒಂದು ಸಿನಿಮಾದಲ್ಲಿ ನಾಯಕ ನಟಿಯಾಗಿ ಮಿಂಚುವ ಅವಕಾಶವನ್ನು ರಶ್ಮಿಕಾ ಗಿಟ್ಟಿಸಿಕೊಂಡಿದ್ದಾರೆ. ಹೌದು, ವಿಜಯ್ ಅವರು ತೆಲುಗಿನ ಖ್ಯಾತ ನಿರ್ದೇಶಕ ವಂಶಿ ಪೈಡಿಪಲ್ಲಿ ಜೊತೆ ತಮ್ಮ 66ನೇ ಚಿತ್ರದಲ್ಲಿ ನಟಿಸುವುದಾಗಿ ಘೋಷಿಸಿದ್ದಾರೆ. ಮತ್ತು ಈ ಚಿತ್ರಕ್ಕೆ ತಾತ್ಕಾಲಿಕವಾಗಿ 'ದಳಪತಿ 66' ಎಂದು ಹೆಸರಿಡಲಾಗಿದೆ. ಇನ್ನು, ವರದಿಗಳ ಪ್ರಕಾರ ನಟಿ ರಶ್ಮಿಕಾ ಮಂದಣ್ಣ ಈ 'ದಳಪತಿ 66' ಚಿತ್ರದಲ್ಲಿ ವಿಜಯ್ ಜೊತೆ ಜೋಡಿಯಾಗಬಹುದು ಎಂದು ಹೇಳಲಾಗುತ್ತಿದೆ.
'ದಳಪತಿ 66' ತಮಿಳು-ತೆಲುಗು ದ್ವಿಭಾಷಾ ಚಿತ್ರವಾಗಿದೆ. ಹಾಗಾಗಿ, ರಶ್ಮಿಕಾ ಅವರು ಎರಡೂ ಭಾಷೆಗಳಲ್ಲಿ ಪ್ರಸಿದ್ಧ ನಟಿಯಾಗಿರುವುದರಿಂದ ವಿಜಯ್‌ಗೆ ಜೋಡಿಯಾಗಿ ರಶ್ಮಿಕಾ ಅವರನ್ನು ಆಯ್ಕೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರಂತೆ. ಈಗಾಗಲೇ, ನಟಿಯೊಂದಿಗೆ ಮಾತುಕತೆಗಳು ನಡೆಯುತ್ತಿದ್ದು, ರಶ್ಮಿಕಾ ಚಿತ್ರವನ್ನು ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ತಿಳಿದುಬಂದಿದೆ. ಏತನ್ಮಧ್ಯೆ, ಥಮನ್ ಅವರು 'ದಳಪತಿ 66' ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ. 'ದಳಪತಿ 66' ಚಿತ್ರದಲ್ಲಿ ನಟಿಸಿದರೆ ಅದು ತಮಿಳಿನಲ್ಲಿ ನಟಿ ರಶ್ಮಿಕಾ ಅವರ ಎರಡನೇ ಸಿನಿಮಾ ಆಗಲಿದೆ. ಇದಲ್ಲದೇ, ನ್ಯಾಷನಲ್ ಕ್ರಶ್​​ಗೆ ಹಿಂದಿಯಲ್ಲೂ, ತೆಲುಗಿನಲ್ಲೂ ಸಾಲು ಸಾಲು ಸಿನಿಮಾಗಳ ಆಫರ್​​ಗಳು ಲಭಿಸುತ್ತಿವೆ.