ಟಾಲಿವುಡ್ನಲ್ಲಿ ಸದ್ಯ ಕನ್ನಡ ಸುಂದರಿಯರದ್ದೆ ಹವಾ. ಹೌದು, ಟಾಲಿವುಡ್ನ ಯಾವುದೇ ಸಿನಿಮಾ ನೋಡಿದರೂ, ಕನ್ನಡದ ಹೀರೋಯಿನ್ಗಳೆ ಹೆಚ್ಚು ಕಾಣಿಸಿಕೊಳ್ಳುತ್ತಿರುವುದು. ಈಗಾಗಲೇ, ನಟಿ ರಶ್ಮಿಕಾ ಮಂದಣ್ಣ ಮತ್ತು ನಟಿ ಪೂಜಾ ಹೆಗ್ಡೆ ತೆಲುಗು ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. 'ಪೆಳ್ಳಿ ಸಂದಡಿ' ಎಂಬ ತಮ್ಮ ಮೊದಲ ಸಿನಿಮಾ ಮೂಲಕ ನಟಿ ಶ್ರೀಲೀಲಾ ಅವರು ಕೂಡ ತೆಲುಗಿನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇನ್ನು, ಮೂರು ತೆಲುಗು ಸಿನಿಮಾಗಳ ಮೂಲಕ ಮಂಗಳೂರು ಬೆಡಗಿ ಕೃತಿ ಶೆಟ್ಟಿ ಕೂಡ ತೆಲುಗು ಪ್ರೇಕ್ಷಕರ ಜನಮೆಚ್ಚುಗೆ ಗಳಿಸಿದ್ದಾರೆ.
ನಟನೆ ಮತ್ತು ಗ್ಲಾಮರ್ನಿಂದಾಗಿ ಈ ನಾಲ್ಕು ನಟಿಮಣಿಯರು ತೆಲುಗು ಪ್ರೇಕ್ಷಕರ ಗಮನ ಸೆಳೆದರುವುದು ಗೊತ್ತೆ ಇದೆ. ಇದರ ಜೊತೆಗೆ, ನಮ್ಮ ಈ ಕನ್ನಡದ ಕುವರಿಯರ ನಡುವೆ ಟಾಲಿವುಡ್ನಲ್ಲಿ ಸದ್ಯ ಸಿಕ್ಕಾಪಟ್ಟೆ ಕಾಂಪಿಟಿಷನ್ ನಡೆಯುತ್ತಿದೆ ಎಂದೇ ಹೇಳಬೇಕು. ಹೌದು, ಈ ನಾಲ್ಕು ಕನ್ನಡದ ಕುಡಿಗಳು ತೆಲುಗಿನಲ್ಲಿ ಸಾಲು ಸಾಲು ಸಿನಿಮಾಗಳು ಮಾಡುತ್ತಿದ್ದರೂ, ಸಿನಿಮಾ ಆಫರ್ಗಳನ್ನು ಪಡೆಯುವುದರಲ್ಲಿ ಮಾತ್ರ ಸಖತ್ ಕಾಂಪಿಟಿಷನ್ ಎದುರಿಸುತ್ತಿದ್ದಾರೆ ಎನ್ನಲಾಗಿದೆ. ನಿಜ, ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ 'ಪುಷ್ಪ' ಚಿತ್ರದಲ್ಲಿ ಮಿಂಚಿದ್ದು, ಮುಂಬರುವ 'ಪುಷ್ಪ-2' ಮತ್ತು 'ಅಡವಾಳ್ಳು ಮೀಕು ಜೋಹರ್ಲು' ಎಂಬ ಎರಡು ಸಿನಿಮಾಗಳಲ್ಲಿ ನಟಿಸಿದ್ದು ಅವುಗಳ ರಿಲೀಸ್ಗೆ ಕಾಯುತ್ತಿದ್ದಾರೆ.
ಸಿನಿ ಪ್ರೇಕ್ಷಕರಿಗೆ ಬುಟ್ಟ ಬೊಮ್ಮಾ ಆಗಿರುವ ಪೂಜಾ ಹೆಗ್ಡೆ ಕೊನೆದಾಗಿ 'ಮೋಸ್ಟ್ ಏಲಿಜಿಬಲ್ ಬ್ಯಾಚುಲರ್' ಚಿತ್ರದಲ್ಲಿ ನಟ ಅಖಿಲ್ ಅಕ್ಕಿನೇನಿ ಜೊತೆಗೆ ತೆರೆಹಂಚಿಕೊಂಡು ಒಂದು ಹಿಟ್ ನೀಡಿದ್ದು, ಮುಂಬರುವ 'ಆಚಾರ್ಯ' ಮತ್ತು 'ರಾಧೆ ಶ್ಯಾಮ್' ಸಿನಿಮಾಗಳಲ್ಲಿ ಮತ್ತೆ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಮತ್ತೊಂದೆಡೆ, 'ಉಪ್ಪೇನಾ', 'ಶ್ಯಾಮ್ ಸಿಂಘ ರಾಯ್', 'ಬಂಗಾರ್ರಾಜು' ಎಂಬ ಮೂರು ಹಿಟ್ ಚಿತ್ರಗಳನ್ನು ನೀಡಿರುವ ನಟಿ ಕೃತಿ ಶೆಟ್ಟಿ ಗೋಲ್ಡನ್ ಲೆಗ್ ಎನಿಸಿಕೊಂಡಿದ್ದಾರೆ. ಜತೆಗೆ, ರಾಮ್ ಪೋತಿನೇನಿ ಅವರ 19ನೇ ಸಿನಿಮಾ 'ಥಿ ವಾರಿಯರ್' ಮತ್ತು 'ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ' ಎಂಬ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಇನ್ನು, ತೆಲುಗಿನಲ್ಲಿ 'ಪೆಳ್ಳಿ ಸಂದಡಿ' ಚಿತ್ರದಿಂದ ಸಖತ್ ಸದ್ದು ಮಾಡಿ, ಟಾಲಿವುಡ್ ನಟ ರವಿತೇಜ ಅವರ ಹೊಸ ಸಿನಿಮಾ ‘ಧಮಾಕಾ’ದಲ್ಲಿ ಶ್ರೀಲೀಲಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಆ ಚಿತ್ರಕ್ಕಾಗಿ ಅವರು ಭರ್ಜರಿ ಸಂಭಾವನೆ ಡಿಮ್ಯಾಂಡ್ ಮಾಡಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ತಮ್ಮ ಸಂಭಾವನೆಯನ್ನು 75 ಲಕ್ಷಕ್ಕೆ ಹೆಚ್ಚಿಸಿಕೊಂಡಿದ್ದಾರಂತೆ ನಟಿ ಶ್ರೀಲೀಲಾ. ಈ ಸಿನಿಮಾದ ಶೂಟಿಂಗ್ನಲ್ಲಿ ಶ್ರೀಲೀಲಾ ಈಗಾಗಲೇ ಬ್ಯೂಸಿ ಆಗಿದ್ದು, ಇನ್ನೂ ಹೆಸರಿಡದ ಮೂರು ಸಿನಿಮಾಗಳಿಗೆ ಶ್ರೀಲೀಲಾ ಆಯ್ಕೆ ಆಗಿದ್ದಾರೆ ಎನ್ನಲಾಗಿದೆ. ತೆಲುಗಿನಲ್ಲಿ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆಯಾಗಿರುವ ಸಿತಾರಾ ಎಂಟರ್ಟೈನ್ವೆುಂಟ್ನ ಮುಂದಿನ ಎರಡು ಚಿತ್ರಗಳಿಗೆ ನಾಯಕಿಯಾಗಿ ಶ್ರೀಲೀಲಾ ಅವರು ಆಯ್ಕೆಯಾಗಿದ್ದಾರೆ.
ವರುಣ್ ತೇಜ, ನವೀನ್ ಪೊಲಿಶೆಟ್ಟಿ ನಾಯಕರಾಗಿ ನಟಿಸಲಿರುವ ಸಿನಿಮಾಗಳಲ್ಲಿ ಶ್ರೀಲೀಲಾ ತೆರೆಹಂಚಿಕೊಳ್ಳಲಿದ್ದಾರಂತೆ. ಇನ್ನು, ಒಂದು ಹೆಸರಿಡಿದ ಮತ್ತು ಹೆಚ್ಚು ಮಾಹಿತಿ ಇಲ್ಲದ ಸಿನಿಮಾದಲ್ಲಿ ಕೂಡ ನಟಿ ಶ್ರೀಲೀಲಾ ನಾಯಕಿಯಾಗುತ್ತಾರೆ ಎಂಬ ಮಾತುಗಳು ಕೇಳಿಬಂದಿವೆ. ಹೀಗೆ ಸಾಲು ಸಾಲು ಅಥವಾ ಒಂದರ ನಂತರ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದರೂ, ಇನ್ನು ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳು ಸೆಟ್ಟೇರಲಿದ್ದು ಆ ಚಿತ್ರಗಳ ಆಫರ್ಗಳನ್ನು ಕೂಡ ಪಡೆಯುಲು ನಮ್ಮ ಕನ್ನಡದ ಕುವರಿಯರ ನಡುವೆ ಟಫ್ ಕಾಂಪಿಟಿಷನ್ ನಡೆಯುತ್ತಿದೆಯಂತೆ. ಅದರಲ್ಲೂ, ಶ್ರೀಲೀಲಾ ಮತ್ತು ರಶ್ಮಿಕಾ ಅವರ ನಡುವೆ ಟಫ್ ಕಾಂಪಿಟಿಷನ್ ಇದ್ದರೆ, ಕೃತಿ ಶೆಟ್ಟಿ ಮತ್ತು ಪೂಜಾ ಹೆಗ್ಡೆ ನಡುವೆ ತೀವ್ರ ಪೈಪೋಟಿ ಇದೆಯಂತೆ.
ಕೇವಲ ಈ ಟಾಪ್ ನಾಲ್ಕು ನಟಿಯರಲ್ಲದೇ, ನಮ್ಮ ಶೃಂಗೇರಿ ಮೂಲದ ನಭಾ ನಟೇಶ್ ಅವರು ಕೂಡ ತೆಲುಗು ಚಿತ್ರರಂಗದಲ್ಲಿ ಸಣ್ಣ ಪುಟ್ಟ ಸಿನಿಮಾಗಳನ್ನು ಮಾಡಿಕೊಂಡು ಒಂದೊಳ್ಳೆ ಬ್ರೇಕ್ ಗೋಸ್ಕರ ಕಾಯುತ್ತಿದ್ದಾರೆ. ಒಟ್ಟಾರೆ, ಟಾಲಿವುಡ್ನಲ್ಲಿ ಯಾವ ಸಿನಿಮಾದಲ್ಲಿ ನೋಡಿದರು ಕನ್ನಡ ಹೀರೋಯಿನ್ಗಳು ಕಾಣುತ್ತಿದ್ದು, ತೆಲುಗಿನಲ್ಲಿ ಕನ್ನಡ ನಟಿಮಣಿಯರ ಹವಾ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ. ಟಾಲಿವುಡ್ನಲ್ಲಿ ಹೆಚ್ಚು ತೆಲುಗು ಸುಂದರಿಯರು ಇರದ ಕಾರಣ, ಇದು ನಮ್ಮ ಕನ್ನಡದ ಬೆಡಗಿಯರಿಗೆ ಮತ್ತು ಬಾಲಿವುಡ್ ಬೆಡಗಿಯರಿಗೂ ಒಂದೊಳ್ಳೆ ಪ್ಲಸ್ ಪಾಯಿಂಟ್ ಎನ್ನಲಾಗಿದೆ. ಇನ್ನು, ಹೆಚ್ಚು ಹೇಳಬೇಕೆಂದರೆ ನಮ್ಮ ಕನ್ನಡದ ಬೆಡಗಿಯರಿಗೆ ಬಾಲಿವುಡ್ನಲ್ಲೂ ಬೇಡಿಕೆ ಹೆಚ್ಚಾಗಿದೆ ಎನ್ನುವುದರಲ್ಲಿ ತಪ್ಪಿಲ್ಲ.