ಸಿನಿವಾಣಿ

‘ಮಿಷನ್ ಮಜ್ನು’ ಮುಗಿಸಿದ ನಟಿ ರಶ್ಮಿಕಾ ಮಂದಣ್ಣ

‘ಮಿಷನ್ ಮಜ್ನು’ ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ, ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಸದ್ದಿಲ್ಲದೆ ಆ ಸಿನಿಮಾದ ಚಿತ್ರೀಕರಣವನ್ನೂ ಅವರು ಮುಗಿಸಿದ್ದಾರೆ. ಶಂತನು ಬಾಗ್ಚಿ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಜನವರಿಯಿಂದಲೇ ಲಕ್ನೋದಲ್ಲಿ ಶುರುವಾಗಿತ್ತು. ಮಾರ್ಚ್​ನಲ್ಲಿ ರಶ್ಮಿಕಾ ತಂಡ ಸೇರಿಕೊಂಡಿದ್ದರು. ಈಗ ಶೂಟಿಂಗ್ ಮುಗಿಸಿ ಮುಂದಿನ ಸಿನಿಮಾದತ್ತ ಮುಖ ಮಾಡಿದ್ದಾರೆ. ‘ಮಿಷನ್ ಮಜ್ನು’ ಸ್ಪೈ ಥ್ರಿಲ್ಲರ್ ಶೈಲಿಯ ಸಿನಿಮಾ. 70 ಮತ್ತು 80ರ ಕಾಲಘಟ್ಟದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುವ ಕಥೆಯಾಗಿದೆ.

ಸಿದ್ಧಾರ್ಥ್ ಮಲ್ಹೋತ್ರಾ ಮೊದಲ ಬಾರಿಗೆ ಈ ಚಿತ್ರದಲ್ಲಿ ಗೂಢಚಾರಿಯಾಗಿ ಕಾಣಿಸಿಕೊಂಡಿದ್ದಾರೆ. ಒಂದು ರಹಸ್ಯ ಕಾರ್ಯಾಚರಣೆಯಿಂದ ಭಾರತ ಮತ್ತು ಪಾಕಿಸ್ತಾನದ ನಡುವಿನ ಬಾಂಧವ್ಯ ಹೇಗೆ ಬದಲಾಯಿತು ಎಂದು ಈ ಚಿತ್ರದಲ್ಲಿ ಹೇಳಲಾಗಿದೆಯಂತೆ. ಇತ್ತ ಬಾಲಿವುಡ್​ನಲ್ಲಿ ಅಮಿತಾಭ್ ಬಚ್ಚನ್ ಜತೆಗಿನ ‘ಗುಡ್​ಬೈ’ ಸಿನಿಮಾದ ಒಂದಷ್ಟು ಭಾಗದ ಶೂಟಿಂಗ್ ಮುಗಿಸಿರುವ ರಶ್ಮಿಕಾ, ‘ಆಡವಾಳ್ಳು ಮೀಕು ಜೋಹಾರ್ಲು’ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ‘ಪುಷ್ಪ’ ಚಿತ್ರದ ಕೊನೇ ಹಂತದ ಶೂಟಿಂಗ್​ನಲ್ಲಿಯೂ ಭಾಗವಹಿಸಲಿದ್ದಾರೆ.