ಸಿನಿವಾಣಿ

ರಂಜನಿ ರಾಘವನ್​ ಕತೆ ಡಬ್ಬಿಸೆ.29ಕ್ಕೆ ಬಿಡುಗಡೆ; ಇದು ಮೊದಲ ಕಥಾಸಂಕಲನ..

ಬೆಂಗಳೂರು: ‘ಕನ್ನಡತಿ’ ಖ್ಯಾತಿಯ ರಂಜನಿ ರಾಘವನ್ ಬರೀ ನಟಿಯಾಗಿಯಷ್ಟೇ ಅಲ್ಲ, ಬರಹಗಾರ್ತಿ ಯಾಗಿಯೂ ಗುರುತಿಸಿಕೊಂಡಿದ್ದಾರೆ. ಹಲವು ಕಥೆಗಳನ್ನು ರಚಿಸಿರುವ ಅವರು, ಕಥೆಗಾರ್ತಿಯಾಗಿಯೂ ಜನಪ್ರಿಯರಾಗಿದ್ದಾರೆ. ಈಗ ತಾವು ಬರೆದ 14 ಕಥೆಗಳನ್ನು ಸೇರಿಸಿ, ‘ಕತೆ ಡಬ್ಬಿ’ ಎಂಬ ಸಂಕಲನ ಮಾಡಿದ್ದಾರೆ. ಬಹುರೂಪಿ ಸಂಸ್ಥೆಯು ಹೊರತರುತ್ತಿರುವ ಈ ಸಂಕಲನವು ಬುಧವಾರ (ಸೆ. 29) ಬಹುರೂಪಿ ಬುಕ್ ಹಬ್​ನಲ್ಲಿ ಬಿಡುಗಡೆಯಾಗಲಿದೆ. ತಮ್ಮ ಮೊದಲ ಕಥಾಸಂಕಲನ ಮತ್ತು ಕಥೆಗಾರ್ತಿಯಾಗಿ ರೂಪುಗೊಂಡಿದ್ದು ಹೇಗೆ ಎಂಬ ವಿಷಯದ ಬಗ್ಗೆ ‘ವಿಜಯವಾಣಿ’ ಜತೆಗೆ ಮಾತನಾಡಿದ್ದಾರೆ ರಂಜನಿ.

‘ಚಿಕ್ಕವಯಸ್ಸಿನಿಂದಲೂ ನನಗೆ ಸಾಹಿತ್ಯದ ಬಗ್ಗೆ ಆಸಕ್ತಿ ಇತ್ತು. ಓದು ಮುಗಿದ ಮೇಲೆ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದೆ. ಈ ಸಂದರ್ಭದಲ್ಲಿ ಓದು ಮತ್ತು ಸಾಹಿತ್ಯದ ಕಡೆ ಇನ್ನಷ್ಟು ಒಲವು ಹೆಚ್ಚಾಯಿತು. ಆದರೆ, ಈ ಮೊದಲು ನಾನು ಬರೆದಿರಲಿಲ್ಲ. ಬರೆಯಬೇಕು ಎಂದೆನಿಸಿದ್ದು ಅಭಿನಯ ಶುರು ಮಾಡಿದಾಗ. ಚಿತ್ರಕಥೆ ಬರೆಯುವತ್ತ ಆಸಕ್ತಿ ಹೋಯಿತು. ‘ಇಷ್ಟದೇವತೆ’ ಎಂಬ ಧಾರಾವಾಹಿಗೆ ಚಿತ್ರಕಥೆ ಬರೆದೆ’ ಎಂದು ನೆನಪಿಸಿಕೊಳ್ಳುತ್ತಾರೆ ರಂಜನಿ. ‘ಕನ್ನಡತಿ’ ಧಾರಾವಾಹಿಯಲ್ಲಿ ನಟಿಸುವಾಗ ಬರವಣಿಗೆ ಸ್ವಲ್ಪ ಮಿಸ್ ಆಗಿತ್ತಂತೆ. ‘ಎರಡನೆಯ ಲಾಕ್​ಡೌನ್ ಸಮಯದಲ್ಲಿ ಸಾಕಷ್ಟು ಸಮಯ ವಿತ್ತು. ಈ ಸಂದರ್ಭದಲ್ಲಿ ಅವಧಿಮ್ಯಾಗ್​ಗೆ ಬರೆದೆ. ಕಥೆಗಳು ಪ್ರಕಟವಾಗುತ್ತಿದ್ದಂತೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಜವಾಬ್ದಾರಿ ಹೆಚ್ಚಾಗುತ್ತಾ ಹೋಯಿತು. ಖುಷಿ ಅನಿಸಿದ 14 ಕಥೆಗಳು ಈಗ ಕಥಾಸಂಕಲನದ ರೂಪದಲ್ಲಿ ಹೊರಬರುತ್ತಿದೆ’ ಎನ್ನುತ್ತಾರೆ ರಂಜನಿ.