ನವೆಂಬರ್ 5 ರಂದು ವಿಶ್ವಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಲಿರುವ 'ರಾಮಾಯಣ: ಭಾಗ 1'.
ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಜಕೀಯ ನಾಯಕರಿಗಾಗಿ ವಿಶೇಷ ಪ್ರದರ್ಶನಕ್ಕೆ ಸಿದ್ಧತೆ.
ವಿಶೇಷ ಪ್ರದರ್ಶನಕ್ಕಾಗಿ ಅನುಮತಿ ಪಡೆಯಲು ರಾಮಾಯಣ ಸಿನಿಮಾ ನಿರ್ಮಾಪಕರ ಓಡಾಟ
ನಿತೀಶ್ ತಿವಾರಿ ನಿರ್ದೇಶನದ ರಾಮಾಯಣ; ಭಾಗ 1 ಸಿನಿಮಾವು ನವೆಂಬರ್ 5ರಂದು ವಿಶ್ವಾದ್ಯಂತ ತೆರೆಕಾಣಲು ಸಜ್ಜಾಗಿದೆ. ಸಿನಿಮಾ ಪ್ರಚಾರ ಕಾರ್ಯವು ಸಮರೋಪದಿ ನಡೆಯುತ್ತಿರುವ ಹೊತ್ತಲ್ಲಿ ರೋಚಕ ಮಾಹಿತಿ ಹೊರಬಂದಿದೆ. ವರದಿಗಳ ಪ್ರಕಾರ ಸಿನಿಮಾವನ್ನು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಜಕೀಯ ನಾಯಕರಿಗಾಗಿ ವಿಶೇಷ ಪ್ರದರ್ಶನವನ್ನು ಆಯೋಜಿಸಲು ಯೋಜನೆ ರೂಪಿಸಲಾಗುತ್ತಿದೆ ಎನ್ನಲಾಗಿದೆ.
ಮಾಧ್ಯಮಗಳ ವರದಿ ಪ್ರಕಾರ, ರಾಮಾಯಣ; ಭಾಗ1ರ ಸಿನಿಮಾವನ್ನು ರಾಷ್ಟ್ರಪತಿ ಭವನದಲ್ಲಿ ವಿಶೇಷವಾಗಿ ಪ್ರದರ್ಶನ ಆಯೋಜಿಸಲು ನಿರ್ಮಾಪಕರು ನಿರ್ಧರಿಸಿದ್ದು, ಇದಕ್ಕಾಗಿ ಅನುಮತಿ ಪಡೆಯುವ ಪ್ರಕ್ರಿಯೆಯಲ್ಲಿದ್ದಾರೆ ಎನ್ನಲಾಗಿದೆ.
ಚಿತ್ರವು ಜಾಗತಿಕವಾಗಿ ಥಿಯೇಟರ್ಗಳಲ್ಲಿ ಬಿಡುಗಡೆಯಾಗುವ ದಿನವಾದ ನ.5ರಂದು ರಾಷ್ಟ್ರಪತಿ ಭವನದಲ್ಲೂ ವಿಶೇಷ ಪ್ರದರ್ಶನ ಏರ್ಪಡಿಸಲು ಸಿದ್ಧತೆ ನಡೆಯುತ್ತಿದೆ. ಭಾರತೀಯ ಚಿತ್ರರಂಗದ ಅತ್ಯಂತ ಮಹತ್ವಾಕಾಂಕ್ಷೆಯ ಈ ಯೋಜನೆಗೆ ಇದೊಂದು ಮಹತ್ವದ ನಿರ್ಧಾರ ಎನ್ನಲಾಗುತ್ತಿದೆ.
ರಾಷ್ಟ್ರಪತಿ ಭವನದಲ್ಲಿ ಸಿನಿಮಾ ವಿಶೇಷ ಪ್ರಸಾರವಾಗುವ ವೇಳೆ ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಹಾಗೂ ನಿರ್ದೇಶಕ ನಿತೇಶ್ ತಿವಾರಿ ಭಾಗವಹಿಸುವ ನಿರೀಕ್ಷೆಯಿದೆ. ಇದರೊಂದಿಗೆ, ಮುಂಬೈನ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಹಾಗೂ ದೆಹಲಿಯಲ್ಲಿ ಗಣ್ಯರಿಗಾಗಿ ಎರಡು ಪ್ರತ್ಯೇಕ ಪ್ರೀಮಿಯರ್ಗಳನ್ನು ಆಯೋಜಿಸಲು ತಂಡ ಯೋಜಿಸುತ್ತಿದೆ.
ಇದನ್ನೂ ಓದಿ: ‘ರಾಮಾಯಣ’ಹೊಸ ಪೋಸ್ಟರ್ಗಳು ರಿಲೀಸ್; ಕೈಕೇಯಿಯಾಗಿ ಲಾರಾ ದತ್ತಾ, ಮಂಥರೆಯಾಗಿ ಶೀಬಾ ಚಡ್ಡಾ | Ramayana Posters
'ರಾಮಾಯಣ' ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗವು ನವೆಂಬರ್ 5 ರಂದು ಮತ್ತು ಎರಡನೇ ಭಾಗವು 2027ರ ದೀಪಾವಳಿಗೆ ಬಿಡುಗಡೆಗೊಳ್ಳಲಿದೆ. ಚಿತ್ರದಲ್ಲಿ ರಣಬೀರ್ ಕಪೂರ್ 'ಶ್ರೀರಾಮ'ನಾಗಿ, ಸಾಯಿ ಪಲ್ಲವಿ 'ಸೀತಾ ಮಾತೆ'ಯಾಗಿ ನಟಿಸಿದ್ದಾರೆ. ರಾಕ್ಷಸ ರಾಜ 'ರಾವಣ'ನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ರಾವಿ ದುಬೆ 'ಲಕ್ಷ್ಮಣ'ನಾಗಿ ಮತ್ತು ಸನ್ನಿಡಿಯೋಲ್ 'ಹನುಮಂತ'ನಾಗಿ ಅಭಿನಯಿಸುತ್ತಿದ್ದಾರೆ. ಇವರೊಂದಿಗೆ ಶೀಬಾ ಚಡ್ಡಾ, ಅರುಣ್ ಗೋವಿಲ್, ಲಾರಾ ದತ್ತಾ, ರಾಕುಲ್ ಪ್ರೀತ್ ಸಿಂಗ್, ವಿವೇಕ್ ಒಬೆರಾಯ್ ಸೇರಿದಂತೆ ಘಟಾನುಘಟಿ ನಟ,ನಟಿಯರು ಸಿನಿಮಾದಲ್ಲಿದ್ದಾರೆ
ಪ್ರೈಮ್ ಫೋಕಸ್ ಸ್ಟುಡಿಯೋಸ್, DNEG ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸುಮಾರು 4,000 ಕೋಟಿ ರೂ. ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ. ಆಸ್ಕರ್ ವಿಜೇತ ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರಹಮಾನ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಪಂಕಜ್ ಕುಮಾರ್ ಮತ್ತು ಮಹೇಶ್ ಲಿಮಾಯೆ ಕ್ಯಾಮೆರಾ ಕೈಚಳಕದಲ್ಲಿ ಸಿನಿಮಾ ಮೂಡಿ ಬಂದಿದೆ, (ಏಜೆನ್ಸೀಸ್).