Ramayana Movie: ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಪಾತ್ರಗಳ ಪರಿಚಯ ಮುಂದುವರಿದಿದ್ದು, ಇದೀಗ ಕೈಕೇಯಿ ಮತ್ತು ಮಂಥರೆಯ ಹೊಸ ಪೋಸ್ಟರ್‌ಗಳು ಬಿಡುಗಡೆಯಾಗಿವೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ತಂಡ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟರ್‌ಗಳನ್ನು ಹಂಚಿಕೊಂಡಿದೆ. ನಟಿ ಲಾರಾ ದತ್ತಾ ಕೈಕೇಯಿಯಾಗಿ, ಶೀಬಾ ಚಡ್ಡಾ ಮಂಥರೆಯಾಗಿ ಕಾಣಿಸಿಕೊಂಡಿದ್ದಾರೆ.
ರಾಮಾಯಣದ ಕಥೆಯಲ್ಲಿ ಮಹತ್ವದ ತಿರುವು ನೀಡುವ ಕೈಕೇಯಿ ಮತ್ತು ಮಂಥರೆಯ ಪಾತ್ರಗಳ ಹೊಸ ಲುಕ್ ಈಗ ಗಮನ ಸೆಳೆಯುತ್ತಿದೆ. ಕೈಕೇಯಿ ಕೇಳುವ ಎರಡು ವರಗಳು ರಾಜ ದಶರಥ ಮತ್ತು ರಾಮನ ಬದುಕನ್ನೇ ಬದಲಿಸುತ್ತವೆ. ಇನ್ನು ಮಂಥರೆಯ ಮಾತುಗಳು ಕೈಕೇಯಿಯ ನಿರ್ಧಾರದ ಮೇಲೆ ಪ್ರಭಾವ ಬೀರಿ, ಅಯೋಧ್ಯೆಯಲ್ಲಿ ನಡೆಯುವ ಪ್ರಮುಖ ಘಟನೆಗಳಿಗೆ ಕಾರಣವಾಗುತ್ತವೆ.
ಕೈಕೇಯಿಯ ಪಾತ್ರದಲ್ಲಿ ಲಾರಾ ದತ್ತಾ ರಾಜಮನೆತನದ ಉಡುಗೆ, ಆಭರಣಗಳೊಂದಿಗೆ ರಾಣಿಯ ಗಾಂಭೀರ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಂದೆಡೆ, ಮಂಥರೆಯಾಗಿ ಶೀಬಾ ಚಡ್ಡಾ ವಯಸ್ಸಾದ ಮಹಿಳೆಯ ಲುಕ್‌ನಲ್ಲಿ, ಕೈಯಲ್ಲಿ ಊರುಗೋಲು ಹಿಡಿದು ಕಾಣಿಸಿಕೊಂಡಿದ್ದಾರೆ. ಈ ಇಬ್ಬರ ಪಾತ್ರಗಳ ಪೋಸ್ಟರ್‌ಗಳು ಬಿಡುಗಡೆಯಾಗಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿವೆ.
ಇದಕ್ಕೂ ಮುನ್ನ ಚಿತ್ರತಂಡ ಅರುಣ್ ಗೋವಿಲ್ ಅವರನ್ನು ರಾಜ ದಶರಥನ ಪಾತ್ರದಲ್ಲಿ ಪರಿಚಯಿಸಿತ್ತು. ಕಿರುತೆರೆಯಲ್ಲಿ ರಾಮನ ಪಾತ್ರದ ಮೂಲಕ ಮನೆಮಾತಾಗಿದ್ದ ಅರುಣ್ ಗೋವಿಲ್, ಈಗ ಅಯೋಧ್ಯೆಯ ರಾಜ ದಶರಥನಾಗಿ ಕಾಣಿಸಿಕೊಳ್ಳಲಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗ 2026ರ ದೀಪಾವಳಿಗೆ, ಎರಡನೇ ಭಾಗ 2027ರ ದೀಪಾವಳಿಗೆ ತೆರೆಗೆ ಬರುವ ನಿರೀಕ್ಷೆಯಿದೆ.
‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. ರವಿ ದುಬೆ ಲಕ್ಷ್ಮಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಯಶ್ ರಾವಣನಾಗಿ ಮತ್ತು ಸನ್ನಿ ಡಿಯೋಲ್ ಹನುಮಂತನಾಗಿ ಅಭಿನಯಿಸಲಿದ್ದಾರೆ. ಇನ್ನು ರಾಕುಲ್ ಪ್ರೀತ್ ಸಿಂಗ್ ಶೂರ್ಪನಖೆಯ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.
ವರದಿಗಳ ಪ್ರಕಾರ, ‘ರಾಮಾಯಣ’ ಸಿನಿಮಾ ಸುಮಾರು 4,000 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ. ಹಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ದೃಶ್ಯ ಪರಿಣಾಮಗಳ ಕೆಲಸವನ್ನು ಡಿಎನ್‌ಇಜಿ (DNEG) ಮತ್ತು ಪ್ರೈಮ್ ಫೋಕಸ್ ತಂಡಗಳು ನಿರ್ವಹಿಸುತ್ತಿವೆ.
ಇದನ್ನೂ ಓದಿ: ಜಂತರ್ ಮಂತರ್ ಪ್ರತಿಭಟನೆಗೆ ಬ್ರೇಕ್: ಪ್ರಕಾಶ್ ರಾಜ್ ಕಿಡಿ, ಅನುರಾಗ್ ಕಶ್ಯಪ್ ಸಾಥ್! | Prakash Raj
ಚಿತ್ರತಂಡ ಒಂದೊಂದೇ ಪಾತ್ರಗಳ ಪೋಸ್ಟರ್‌ಗಳನ್ನು ಬಿಡುಗಡೆ ಮಾಡುತ್ತಿದ್ದು, ಸಿನಿಮಾ ಬಗ್ಗೆ ಅಭಿಮಾನಿಗಳ ಕುತೂಹಲವೂ ಹೆಚ್ಚುತ್ತಿದೆ. ಭಾರತೀಯ ಮಹಾಕಾವ್ಯವಾದ ರಾಮಾಯಣವನ್ನು ಭವ್ಯವಾಗಿ ತೆರೆಮೇಲೆ ಹೇಗೆ ತೋರಿಸಲಿದ್ದಾರೆ ಎಂಬುದನ್ನು ನೋಡಲು ಸಿನಿಪ್ರಿಯರು ಕಾಯುತ್ತಿದ್ದಾರೆ.