ಸಿನಿವಾಣಿ

ಬನ್ಸಾಲಿ ನಿರ್ದೇಶನದ 'ಬೈಜು ಬಾವ್ರಾ' ಚಿತ್ರಕ್ಕೆ ರಣವೀರ್​ ಕನ್ಫರ್ಮ್​​

ಮುಂಬೈ: ಬಾಲಿವುಡ್​ನ ಜನಪ್ರಿಯ ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ, 'ಬೈಜು ಬಾವ್ರಾ' ಎಂಬ ಚಿತ್ರವನ್ನು ನಿರ್ದೇಶಿಸುತ್ತಿರುವ ವಿಷಯ ನಿನ್ನೆ ಮೊನ್ನೆಯದಲ್ಲ. ಒಂದೆರೆಡು ವರ್ಷಗಳಿಂದ ಕೇಳಿಬರುತ್ತಲೇ ಇದೆ. ಆ ಚಿತ್ರಕ್ಕೆ ರಣಬೀರ್​ ಕಪೂರ್​ ನಾಯಕನಾಗುವ ಸಾಧ್ಯತೆ ಇದೆ ಎಂಬ ಸುದ್ದಿ ಇತ್ತು. ಈಗ ಬಂದಿರುವ ಸುದ್ದಿಯ ಪ್ರಕಾರ, ರಣವೀರ್​ ಸಿಂಗ್​ ಚಿತ್ರದ ನಾಯಕರಾಗಿ ಆಯ್ಕೆಯಾಗಿದ್ದಾರಂತೆ. ಈಗಾಗಲೇ ಬನ್ಸಾಲಿ ನಿದೇಣದಲ್ಲಿ ರಣವೀರ್​, 'ರಾಮ್​-ಲೀಲಾ', 'ಬಾಜಿರಾವ್​ ಮಸ್ತಾನಿ' ಮತ್ತು 'ಪದ್ಮಾವತ್​' ಚಿತ್ರಗಳಲ್ಲಿ ನಟಿಸಿದ್ದರು. ಈಗ ಬನ್ಸಾಲಿ ಮತ್ತು ರಣವೀರ್​ ಕಾಂಬಿನೇಷನ್​ನ ನಾಲ್ಕನೇ ಚಿತ್ರ 'ಬೈಜು ಬಾವ್ರಾ' ಆಗಲಿದೆ.

ಆಲಿಯಾ ಭಟ್​ ಅಭಿನಯದಲ್ಲಿ 'ಗಂಗೂಬಾಯಿ ಕಥಿಯಾವಾಡಿ' ಚಿತ್ರವನ್ನು ನಿರ್ದೇಶಿಸಿರುವ ಬನ್ಸಾಲಿ, ಈ ವರ್ಷದ ಕೊನೆಯಲ್ಲಿ ಆ ಚಿತ್ರವನ್ನು ಬಿಡಗುಡೆ ಮಾಡಲಿದ್ದಾರೆ. ಆ ಚಿತ್ರ ಮುಗಿಯುತ್ತಿದ್ದಂತೆಯೇ ಅವರು, 'ಬೈಜು ಬಾವ್ರಾ' ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದು, ನಾಯಕನ ಪಾತ್ರ ಮಾಡುವುದಕ್ಕೆ ರಣವೀರ್​ ಸಿಂಗ್​ ಅವರನ್ನು ಆಯ್ಕೆ ಮಾಡಿದ್ದಾರಂತೆ. ರಣವೀರ್​ ಸಹ ಚಿತ್ರದಲ್ಲಿ ನಟಿಸುವುದಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರಂತೆ.

ಹಾಗೆ ನೋಡಿದರೆ, ರಣಬೀರ್​ ಸಿಂಗ್​ ಯಾವತ್ತೂ ಬನ್ಸಾಲಿ ಅವರ ಆಯ್ಕೆ ಆಗಿರಲಿಲ್ಲವಂತೆ. 'ಬೈಜು ಬಾವ್ರಾ' ಚಿತ್ರದಲ್ಲಿನ ನಾಯಕನ ಪಾತ್ರ ಮಾಡುವುದಕ್ಕೆ ಅವರ ಮೊದಲ ಆಯ್ಕೆ ರಣವೀರ್​ ಸಿಂಗ್​ ಆಗಿತ್ತಂತೆ. ಆದರೆ, ಚಿತ್ರದ ಬಗ್ಗೆ ಸುಳ್ಳುಸುದ್ದಿಗಳು ಹೆಚ್ಚಾದ ಕಾರಣ, ಇದೀಗ ಬನ್ಸಾಲಿ ಅವರೇ ಮುಂದೆ ಬಂದು ಚಿತ್ರಕ್ಕೆ ರಣವೀರ್​ ಆಯ್ಕೆಯಾಗಿರುವ ಬಗ್ಗೆ ಹೇಳಿದ್ದಾರೆ.

1952ರಲ್ಲೊಮ್ಮೆ 'ಬೈಜು ಬಾವ್ರಾ' ಚಿತ್ರ ಬಂದಿದ್ದು, ಬಾವ್ರಾ ಪಾತ್ರವನ್ನು ಆಗಿನ ಖ್ಯಾತ ನಟ ಭರತ್​ ಭೂಷಣ್​ ನಿರ್ವಹಿಸಿದ್ದರು. ಅವರಿಗೆ ನಾಯಕಿಯಾಗಿ ಮೀನಾಕುಮಾರಿ ನಟಿಸಿದ್ದು, ಈಗ ಆ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದೆ.