ಸಿನಿವಾಣಿ

ಇಟ್ಸ್​ ಆಫಿಶಿಯಲ್​ ... ರಾಣಾ-ಮಿಹಿಕಾ ನಿಶ್ಚಿತಾರ್ಥ ಆಯ್ತು!

ಬಾಹುಬಲಿ ಸಿನಿಮಾ ಖ್ಯಾತಿಯ ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್​ ಅವರು ಮದುವೆಯಾಗುತ್ತಿರುವ ವಿಷಯ ಕಳೆದ ವಾರವಷ್ಟೇ ಕೇಳಿ ಬಂದಿತ್ತು. ಖುದ್ದು ರಾಣಾ, ಸೋಷಿಯಲ್​ ಮೀಡಿಯಾದಲ್ಲಿ ತಾವು ಮದುವೆಯಾಗುತ್ತಿರುವ ಹುಡುಗಿಯ ಫೋಟೋ ಹಾಕಿಕೊಂಡು ಸಂಭ್ರಮಿಸಿದ್ದರು. ಇದೀಗ ಈ ಜೋಡಿಯ ನಿಶ್ಚಿತಾರ್ಥ ಆಗಿದ್ದು, ಇಟ್ಸ್​ ಅಫಿಶಿಯಲ್​ ಎಂದು ರಾಣಾ ಫೋಟೋ ಶೇರ್​ ಮಾಡಿದ್ದಾರೆ.

ಟಾಲಿವುಡ್​ನ ಮೋಸ್ಟ್​ ಎಲಿಜಿಬಲ್​ ಬ್ಯಾಚಲರ್​ ಆಗಿರುವ 35 ವರ್ಷದ ರಾಣಾ, ಮದುವೆಯ ಮೇ 12ರಂದು ತಾವು ಮಿಹಿಕಾ ಬಜಾಜ್​ ಅವರನ್ನು ಮದುವೆಯಾಗುತ್ತಿರುವುದಾಗಿ ಅಧಿಕೃತವಾಗಿ ಹೇಳಿಕೊಂಡಿದ್ದರು. ಅದರಂತೆ ಅವರಿಬ್ಬರ ಎಂಗೇಜ್​ಮೆಂಟ್​ ಸದ್ದಿಲ್ಲದೆ ನಡೆದಿದೆ. ಕರೊನಾ ಹಿನ್ನೆಲೆಯಲ್ಲಿ ಸೀಮಿತ ಜನರ ಸಮ್ಮುಖದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ. ಹೈದರಾಬಾದ್​ನಲ್ಲಿ ಈ ನಿಶ್ಚಿತಾರ್ಥ ನಡೆದಿದ್ದು, ಕುಟುಂಬಸ್ಥರು ಮತ್ತು ಆಪ್ತವರ್ಗದವರು ಮಾತ್ರ ಈ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.

ಇನ್ನು ರಾಣಾ ಮತ್ತು ಮಿಹಿಕಾ ಅವರ ನಿಶ್ಚಿತಾರ್ಥಕ್ಕೆ ಹಲವು ಸೆಲೆಬ್ರಿಟಿಗಳು ಶುಭ ಕೋರಿರುವುದು ವಿಶೇಷ. ಶಿವಕಾರ್ತಿಕೇಯನ್​, ಸೈನಾ ನೆಹವಾಲ್​, ಪ್ರಭಾಸ್​ ಮುಂತಾದವರು ಶುಭ ಕೋರಿ ಸಂದೇಶ ಹಾಕಿದ್ದಾರೆ. ಇನ್ನು ರಾಣಾ ಅವರ ಅಸಂಖ್ಯ ಅಭಿಮಾನಿಗಳು, ತಮ್ಮ ಮೆಚ್ಚಿನ ನಟನ ಈ ನಿಶ್ಚಿತಾರ್ಥಕ್ಕೆ ಶುಭ ಕೋರಿದ್ದಾರೆ.

ಈಗಷ್ಟೇ ನಿಶ್ಚಿತಾರ್ಥ ಆಚರಿಸಿಕೊಂಡಿರುವ ರಾಣಾ ಮತ್ತು ಮಿಹಿಕಾ ಬಜಾಜ್​ ಅವರ ಮದುವೆ ಯಾವಾಗ ಎಂಬ ಪ್ರಶ್ನೆ ಬರುವುದು ಸಹಜ. ಮೂಲಗಳ ಪ್ರಕಾರ, ಈ ಜೋಡಿ ಡಿಸೆಂಬರ್​ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿಯಂತೆ.