ನವದೆಹಲಿ: ಹಿರಿಯ ನಟಿ ಹಾಗೂ ಮಾಜಿ ಸ್ಟಾರ್ ಹೀರೋಯಿನ್ ರಮ್ಯಾ ಕೃಷ್ಣನ್ ( Ramya Krishnan ) ಅವರ ಬಗ್ಗೆ ಕನ್ನಡಿಗರಿಗೆ ವಿಶೇಷವಾಗಿ ಹೇಳಬೇಕಿಲ್ಲ. ಒಂದು ಕಾಲದಲ್ಲಿ ಹಲವು ಕನ್ನಡ ಸಿನಿಮಾಗಳಲ್ಲಿ ಸ್ಟಾರ್ ಹೀರೋಯಿನ್ ಆಗಿ ನಟಿಸಿ ತನ್ನದೇಯಾದ ವಿಶೇಷ ಗುರುತನ್ನು ರಮ್ಯಾ ಕೃಷ್ಣನ್ ಸೃಷ್ಟಿಸಿಕೊಂಡಿದ್ದಾರೆ. ಬಹುಭಾಷಾ ತಾರೆಯಾಗಿರುವ ರಮ್ಯಾ ಕೃಷ್ಣನ್ ಇಂದಿಗೂ ಸಿನಿ ರಂಗದಲ್ಲಿ ಸಕ್ರಿಯರಾಗಿದ್ದಾರೆ.
1967, ಸೆಪ್ಟೆಂಬರ್ 15 ರಂದು ಚೆನ್ನೈನಲ್ಲಿ ಜನಿಸಿದ ರಮ್ಯಾ ಕೃಷ್ಣನ್ 1990 ರಿಂದ 2000 ರವರೆಗೆ ಸುಮಾರು ಒಂದು ದಶಕದ ಕಾಲ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿದರು. ಬಹಳ ಚಿಕ್ಕ ವಯಸ್ಸಿನಲ್ಲೇ ರಮ್ಯಾ ಕೃಷ್ಣನ್ ಅವರು ನಟಿಯಾಗಿ ಚಿತ್ರರಂಗ ಪ್ರವೇಶಿಸಿದರು. ಎಂಟನೇ ತರಗತಿಯಲ್ಲಿ ಓದುತ್ತಿರುವಾಗಲೇ ವೆಲ್ಲೈ ಮಾನಸ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು.
ರಮ್ಯಾ ಕೃಷ್ಣನ್ 1988ರಲ್ಲಿ ಡಾ. ವಿಷ್ಣುವರ್ಧನ್ ನಟನೆಯ ಕೃಷ್ಣ ರುಕ್ಮಿಣಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಕನ್ನಡದಲ್ಲಿ ವಿಷ್ಣುವರ್ಧನ್, ರವಿಚಂದ್ರನ್, ಉಪೇಂದ್ರ ಹಾಗೂ ಶಿವರಾಜ್ಕುಮಾರ್ ಸೇರಿದಂತೆ ಸ್ಟಾರ್ ನಟರ ಜತೆ ನಟಿಸಿದ್ದಾರೆ. ನಾಯಕಿಯಷ್ಟೇ ಅಲ್ಲದೆ ವಿಲನ್ ಪಾತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಬಹಳ ಕಾಲ ನಾಯಕಿಯಾಗಿ ನಟಿಸಿದ್ದ ರಮ್ಯಾ ಕೃಷ್ಣನ್, ಸದ್ಯ ತಾಯಿ ಹಾಗೂ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಬಾಹುಬಲಿ ಸಿನಿಮಾ ನಂತರ ಇಡೀ ಭಾರತ ಚಿತ್ರರಂಗದಲ್ಲಿ ಶಿವಗಾಮಿ ಎಂದೇ ಖ್ಯಾತಿಯಾಗಿದ್ದಾರೆ.
ಅಂದಹಾಗೆ ರಮ್ಯಾ ಕೃಷ್ಣನ್ ಅವರ ವೃತ್ತಿಜೀವನದಲ್ಲಿ ನಡೆದ ಒಂದು ವಿಚಿತ್ರ ಸಂಗತಿಯನ್ನು ಅನೇಕ ಜನರು ಗಮನಿಸಿಲ್ಲ. ಅದೇನೆಂದರೆ, ರಮ್ಯಾ ಅವರು ಓರ್ವ ನಟನ ಜತೆ ಮಗಳಾಗಿ, ಸಹೋದರಿಯಾಗಿ ಮತ್ತು ಹೆಂಡತಿಯಾಗಿ ನಟಿಸಿದ್ದಾರೆ. ಆ ನಟ ಬೇರೆ ಯಾರೂ ಅಲ್ಲ, ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ಮತ್ತು ಖಳನಾಯಕನಾಗಿ ನಟಿಸಿರುವ ನಾಸ್ಸರ್ ಅವರು.
ವಿಶ್ವ ದಾಖಲೆಯನ್ನು ನಿರ್ಮಿಸಿದ ಬಾಹುಬಲಿ ಸಿನಿಮಾದಲ್ಲಿ ರಮ್ಯಾ ಕೃಷ್ಣನ್ ಅವರು ಶಿವಗಾಮಿ ಪಾತ್ರವನ್ನು ನಿರ್ವಹಿಸಿದರೆ, ಅವರ ಗಂಡನಾಗಿ ನಾಸ್ಸರ್ ಅವರು ಬಿಜ್ಜಳನ ಪಾತ್ರವನ್ನು ನಿರ್ವಹಿಸಿದರು. ಇನ್ನು ರಜನಿಕಾಂತ್ ಅಭಿನಯದ ನರಸಿಂಹ ಚಿತ್ರದಲ್ಲಿ ರಮ್ಯಾ ಅವರು ನಾಸ್ಸರ್ ಅವರ ಸಹೋದರಿಯಾಗಿ ನಟಿಸಿದರು. ಈ ಸಿನಿಮಾದಲ್ಲಿ ರಮ್ಯಾ ಅವರು ಖಳನಾಯಕಿಯಾಗಿ ಎಲ್ಲರನ್ನು ರಂಜಿಸಿದರು.
ತಮಿಳಿನ ವಂತ ರಾಜವಥಾನ್ ವರುವೆನ್ ಚಿತ್ರದಲ್ಲಿ ನಾಸ್ಸರ್ ಅವರ ಮಗಳ ಪಾತ್ರವನ್ನು ನಿರ್ವಹಿಸಿದ್ದಾರೆ. ಇದು ಅತ್ತಾರಿಂಟಿಕಿ ದಾರೇದಿಯ ತಮಿಳು ರಿಮೇಕ್ ಆಗಿದ್ದು, ತೆಲುಗಿನಲ್ಲಿ ನದಿಯಾ ಪಾತ್ರವನ್ನು ತಮಿಳಿನಲ್ಲಿ ರಮ್ಯಾ ಕೃಷ್ಣ ನಿರ್ವಹಿಸಿದರು. (ಏಜೆನ್ಸೀಸ್)