ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕೋಟಿ ನಿರ್ಮಾಪಕ ಎಂದೇ ಖ್ಯಾತರಾಗಿದ್ದ ರಾಮು ಅವರಿಗೆ ವಿಷ್ಣುವರ್ಧನ್ ಅಭಿನಯದಲ್ಲಿ ಒಂದು ಚಿತ್ರ ನಿರ್ಮಾಣ ಮಾಡಬೇಕು ಎಂಬ ಆಸೆ ಇತ್ತು. ಈ ನಿಟ್ಟಿನಲ್ಲಿ ಕೆಲವು ಪ್ರಯತ್ನಗಳಾದರೂ, ಅದ್ಯಾಕೋ ವಿಷ್ಣುವರ್ಧನ್ ಅಭಿನಯದಲ್ಲೊಂದು ಸಾಹಸಮಯ ಚಿತ್ರವೊಂದನ್ನು ನಿರ್ಮಿಸಬೇಕು ಎಂಬ ರಾಮು ಅವರ ಕನಸು ನನಸಾಗಲೇ ಇಲ್ಲ.
ಬರೀ ವಿಷ್ಣುವರ್ಧನ್ ಮಾತ್ರವಲ್ಲ, ಪುನೀತ್ ಮತ್ತು ಯಶ್ ಅಭಿನಯದ ಚಿತ್ರಗಳನ್ನು ಸಹ ನಿರ್ಮಿಸುವುದಕ್ಕೆ ಕಾರಣಾಂತರಗಳಿಂದ ಸಾಧ್ಯವಾಗಲೇ ಇಲ್ಲ. ಪುನೀತ್ ರಾಜಕುಮಾರ್, ಯಶ್ ಬಿಟ್ಟರೆ ಇನ್ನೆಲ್ಲ ಟಾಪ್ ಹೀರೋಗಳ ಜತೆಗೆ ಚಿತ್ರ ಮಾಡಿದ್ದರು ಎನ್ನುವುದು ವಿಶೇಷ.
ಹೌದು, ಪುನೀತ್ ಮತ್ತು ಯಶ್ ಅವರನ್ನು ಹೊರತುಪಡಿಸಿದರೆ, ಮಿಕ್ಕಂತೆ ಕನ್ನಡ ಚಿತ್ರರಂಗದ ಎಲ್ಲ ಜನಪ್ರಿಯ ನಟರ ಜತೆಗೂ ರಾಮು ಸಿನಿಮಾ ಮಾಡಿದ್ದರು ಎನ್ನವುದು ವಿಶೇಷ. ಅದರಲ್ಲೂ ಶಿವರಾಜಕುಮಾರ್ ಅವರ ಜತೆಗೆ ಹೆಚ್ಚು ಚಿತ್ರಗಳನ್ನು ಅವರು ಮಾಡಿದ್ದರು. 'ಸಿಂಹದ ಮರಿ', 'ಎಕೆ 47', 'ಬಾವ ಭಾಮೈದ', 'ನಂಜುಂಡಿ', 'ರಾಕ್ಷಸ' ಮತ್ತು 'ತವರಿನ ಸಿರಿ' ಚಿತ್ರಗಳನ್ನು ಶಿವರಾಜಕುಮಾರ್ ಅಭಿನಯದಲ್ಲಿ ನಿರ್ಮಿಸಿದ್ದರು ರಾಮು'. ಶಿವರಾಜಕುಮಾರ್ ಹೊರತುಪಡಿಸಿದರೆ, ರಾಮು ಜತೆಗೆ 'ಹಾಲಿವುಡ್', 'ಆಟೋ ಶಂಕರ್', 'ಮಸ್ತಿ' ಮತ್ತು 'ರಜನಿ' ಚಿತ್ರಗಳನ್ನು ರಾಮು ನಿರ್ಮಿಸಿದ್ದರು.
ಮಿಕ್ಕಂತೆ ರವಿಚಂದ್ರನ್ ಜತೆಗೆ 'ಮಲ್ಲ', ಸುದೀಪ್ ಜತೆಗೆ 'ಕಿಚ್ಚ' ಮತ್ತು 'ಗೂಳಿ', ದರ್ಶನ್ ಜತೆಗೆ 'ಕಲಾಸಿಪಾಳ್ಯ', ಶ್ರೀಮುರಳಿ ಜತೆಗೆ 'ಪ್ರೀತಿಗಾಗಿ', 'ದುನಿಯಾ' ವಿಜಯ್ ಜತೆಗೆ 'ಕಂಠೀರವ' ಮತ್ತು 'ಶಿವಾಜಿನಗರ', ಗಣೇಶ್ ಜತೆಗೆ '99', ಪ್ರಜ್ವಲ್ ಜತೆಗೆ 'ಸಾಗರ್' ಮತ್ತು 'ಅರ್ಜುನ್ ಗೌಡ', ಚಿರಂಜೀವಿ ಸರ್ಜಾ ಜತೆಗೆ 'ಗಂಡೆದೆ', 'ಡಾರ್ಲಿಂಗ್' ಕೃಷ್ಣ ಜತೆಗೆ 'ಮುಂಬೈ' ಚಿತ್ರಗಳನ್ನು ಅವರು ನಿರ್ಮಿಸಿದ್ದರು.