ಸಿನಿವಾಣಿ

'ಕಬ್ಜ' ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆ ಮಾಡಿದ ಆರ್​​ಜಿವಿ

ಬೆಂಗಳೂರು: ಉಪೇಂದ್ರ ಅಭಿನಯಿಸುತ್ತಿರುವ 'ಕಬ್ಜ' ಚಿತ್ರದ ಚಿತ್ರೀಕರಣ ಇದೇ ತಿಂಗಳ ಕೊನೆಯಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ. ಈ ಮಧ್ಯೆ, ನಾಳೆ ಶುಕ್ರವಾರ (ಸೆಪ್ಟೆಂಬರ್​ 18) ಉಪೇಂದ್ರ ಅವರ ಹುಟ್ಟುಹಬ್ಬವಿದ್ದು, 'ಕಬ್ಜ' ಚಿತ್ರತಂಡವು ಥೀಮ್ ಪೋಸ್ಟರ್ ಬಿಡುಗಡೆ ಮಾಡಿ, ಶುಭಕೋರಿದೆ.

ಅಂದಹಾಗೆ, ಈ ಥೀಮ್​ ಪೋಸ್ಟರ್​ ಬಿಡುಗಡೆ ಮಾಡಿದ್ದು ಯಾರು ಗೊತ್ತಾ? ಖ್ಯಾತ ನಿರ್ದೇಶಕ ರಾಮ್​ಗೋಪಾಲ್​ ವರ್ಮಾ. ಅಂಡರ್​​ವರ್ಲ್ಡ್​ ಚಿತ್ರಗಳನ್ಜು ನಿರ್ದೇಶಿಸುವುದರಲ್ಲಿ ದೊಡ್ಡ ಹೆಸರು ಮಾಡಿರುವ ರಾಮ್​ಗೋಪಾಲ್​ ವರ್ಮಾ, ಈ ಅಂಡರ್​ವರ್ಲ್ಡ್​ ಚಿತ್ರದ ಕೆಲವು ತುಣುಕುಗಳನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಥೀಮ್​ ಪೋಸ್ಟರ್​ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

'ಕಬ್ಜ' ಚಿತ್ರದ ಚಿತ್ರೀಕರಣ ಈ ವರ್ಷದ ಆರಂಭದಲ್ಲಿ ಶುರುವಾಗಿ, ಶೇ 40ರಷ್ಟು ಮುಕ್ತಾಯವಾಗಿದೆ. ಇದೀಗ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಉಪೇಂದ್ರ ಅವರು ಈ ಚಿತ್ರಕ್ಕಾಗಿ ಪ್ರತಿದಿನ ನಾಲ್ಕು ಘಂಟೆಗೂ ಹೆಚ್ಚು ಕಾಲ ವ್ಯಾಯಾಮ ಮಾಡಿ, ಪಾತ್ರಕ್ಕೆ ಸೂಕ್ತವಾಗಿ ತಮ್ಮ ದೇಹವನ್ನು ರೂಪಿಸಿಕೊಂಡಿದ್ದಾರೆ.

'ಕಬ್ಜ' ಚಿತ್ರಕ್ಕೆ ಆರ್​. ಚಂದ್ರು ಕಥೆ ಬರೆದು ನಿರ್ದೇಶಿಸುತ್ತಿದ್ದು, ಈ ಚಿತ್ರವು ಏಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ. ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜಿಸಿದರೆ, ಎ.ಜೆ.ಶೆಟ್ಟಿ ಛಾಯಾಗ್ರಹಣ ಮಾಡುತ್ತಿದ್ದಾರೆ.

ಚಿತ್ರದಲ್ಲಿ ಉಪೇಂದ್ರ ಜತೆಗೆ ಜಗಪತಿ ಬಾಬು, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕೇನ್​, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ್ ರಾವ್​ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಚಿತ್ರದ ನಾಯಕಿ ಯಾರೆಂದು ಇನ್ನಷ್ಟೇ ಘೋಷಣೆಯಾಗಬೇಕಿದೆ.