ಹೈದರಾಬಾದ್: ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ ಚಿತ್ರದಲ್ಲಿ ರಾಮ್ಚರಣ್ ತೇಜ ನಟಿಸುತ್ತಿರುವ ವಿಷಯ ಗೊತ್ತಿರಬಹುದು. ಈ ಚಿತ್ರದ ಚಿತ್ರೀಕರಣ ಕಳೆದ ವರ್ಷವೇ ಪ್ರಾರಂಭವಾಗಿ, ಇದೀಗ ಮುಕ್ತಾಯದ ಹಂತಕ್ಕೆ ಬಂದಿದೆ. ಆದರೆ, ಚಿತ್ರತಂಡ ಮಾತ್ರ ಇದುವರೆಗೂ ಹೆಸರನ್ನು ಬಹಿರಂಗಪಡಿಸಿರಲಿಲ್ಲ. ಇಂದು (ಮಾ 27) ರಾಮ್ಚರಣ್ ತೇಜ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಕೊನೆಗೂ ಚಿತ್ರದ ಹೆಸರನ್ನು ಬಹಿರಂಗಪಡಿಸಲಾಗಿದೆ. ಅಂದಹಾಗೆ, ಚಿತ್ರದ ಹೆಸರೇನು ಗೊತ್ತಾ? 'ಗೇಮ್ ಚೇಂಜರ್'.
ಇದನ್ನೂ ಓದಿ: ಮಾಜಿ ಪತ್ನಿ-ಸಹೋದರನ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ
ಸೋಮವಾರ, ಚಿತ್ರತಂಡದವರು ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಳ್ಳುವ ಮೂಲಕ ರಾಮ್ಚರಣ್ ತೇಜಗೆ ಶುಭ ಕೋರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಮ್ಚರಣ್ ತೇಜ, ಇದಕ್ಕಿಂತ ಇನ್ನೊಂದು ಅದ್ಭುತ ಗಿಫ್ಟ್ ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
'ಗೇಮ್ ಚೇಂಜರ್' ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ತೆಲುಗಿನಲ್ಲಿ ನಿರ್ಮಾಣವಾಗಿ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಗೆ ಡಬ್ ಆಗಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ರಾಮ್ಚರಣ್ ತೇಜಗೆ ನಾಯಕಿಯಾಗಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದು, ಜಯರಾಂ, ಅಂಜಲಿ, ಸುನೀಲ್, ಶ್ರೀಕಾಂತ್ ಮುಂತಾದವರು ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ: ಇಂಗ್ಲಿಷ್ ಮೋಹ.. ಟ್ರೋಲ್ ಆದ ಮೋಹಕತಾರೆ; ವೀಕೆಂಡ್ ವಿದ್ ರಮೇಶ್ ಶೋನಲ್ಲಿನ ರಮ್ಯಾ ನಡೆಗೆ ಕಿಡಿಕಾರಿದ ಕನ್ನಡಿಗರು
ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ನಿರ್ಮಾಣ 50ನೇ ಚಿತ್ರ ಇದಾಗಿದ್ದು, ದೊಡ್ಡ ಬಜೆಟ್ನಲ್ಲಿ ನಿರ್ಮಾಣವಾಗುತ್ತಿದೆ. ಎಸ್.ಎಸ್. ಥಮನ್ ಅವರ ಸಂಗೀತ, ತಿರು ಅವರ ಛಾಯಾಗ್ರಹಣವಿರುವ ಈ ಚಿತ್ರವು ಮುಂದಿನ ವರ್ಷ ಸಂಕ್ರಾಂತಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.