Rambha : ನಟಿ ರಂಭಾ ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರಗಳಲ್ಲಿ ಸ್ಟಾರ್ ನಟಿಯ ಪಟ್ಟ ಪಡೆದವರು. ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಾಯಕ ನಟಿ ಮತ್ತು ಪೋಷಕ ನಟಿಯಾಗಿ ನಟಿಸಿದ್ದಾರೆ. ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ನಟನಾ ವೃತ್ತಿಯನ್ನು ತ್ಯಜಿಸಿ, ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇದೀಗ ಪತಿ ಮತ್ತು ಮೂವರು ಮಕ್ಕಳೊಂದಿಗೆ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ.
ಆದರೆ, ಇಂದಿಗೂ ಸಿನಿಪ್ರೇಮಿಗಳು ರಂಭಾ ಅವರನ್ನು ಮರೆತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ರಂಭಾ ಆಗಾಗ ಫೋಟೋ ಮತ್ತು ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿ ಇರುತ್ತಾರೆ. ಇತ್ತೀಚೆಗೆ, ರಂಭಾ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಆಡಿದ ಮಾತುಗಳು ಅಚ್ಚರಿ ಉಂಟುಮಾಡಿದೆ.
ಶ್ರೀಲಂಕಾದ ಕಸ್ಟಮ್ಸ್ ಅಧಿಕಾರಿಗಳ ಕಣ್ತಪ್ಪಿಸಿ, ಭಾರತಕ್ಕೆ ತೆಗೆದುಕೊಂಡು ಬಂದ ವಸ್ತುಗಳ ವಿವರಗಳನ್ನು ನಟಿ ರಂಭಾ ಸ್ವತಃ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ರಂಭಾ ಅವರು ಶ್ರೀಲಂಕಾದಿಂದ ಬಂದಾಗ, ಗೋರಂಟಿ ಗಿಡದ ಎಲ್ಲ ಕೊಂಬೆಗಳನ್ನು ಕತ್ತರಿಸಿ, ಬೇರುಗಳನ್ನು ಮಾತ್ರ ಭಾರತಕ್ಕೆ ತಂದಿದ್ದಾಗಿ ಒಪ್ಪಿಕೊಂಡಿದ್ದಾರೆ.
ಸಾಮಾನ್ಯವಾಗಿ, ಬೇರೆ ದೇಶದಿಂದ ಗಿಡಗಳನ್ನು ವಿಮಾನದಲ್ಲಿ ತರಲು ಅವಕಾಶವಿಲ್ಲ. ಆದರೆ, ನಾನು ಈ ರೀತಿಯ ಹಲವು ಗಿಡಗಳನ್ನು ತಂದಿದ್ದೇನೆ. ಆ ಎಲ್ಲ ಗಿಡಗಳು ನನ್ನ ಮನೆಯ ಹಿಂಭಾಗದಲ್ಲಿವೆ. ನನಗೆ ಈ ರೀತಿಯ ಕೆಲಸ ತುಂಬಾ ಇಷ್ಟ ಎಂದು ರಂಭಾ ಹೇಳಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಬಹಳ ಚರ್ಚೆಯಾಗುತ್ತಿದೆ.
ಅಂದಹಾಗೆ ರಂಭಾ ಅವರು 2010 ರಲ್ಲಿ ಕೆನಡಾ ಮೂಲದ ಉದ್ಯಮಿ ಇಂದ್ರನ್ ಪದ್ಮನಾಥನ್ ಅವರನ್ನು ಮದುವೆಯಾದ ನಂತರ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಸದ್ಯ ಟೊರೊಂಟೊದಲ್ಲಿ ನೆಲೆಸಿದ್ದಾರೆ. ರಂಭಾ ಅವರಿಗೆ ಮೂವರು ಮಕ್ಕಳಿದ್ದಾರೆ. ಅದರಲ್ಲಿ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರನಿದ್ದಾನೆ. (ಏಜೆನ್ಸೀಸ್)