ಸಿನಿವಾಣಿ

'ಅಖಂಡ' ಚಿತ್ರದ ನಿರ್ದೇಶಕನ ಜತೆಗೆ ಪ್ಯಾನ್ ಇಂಡಿಯಾ ಸಿನಿಮಾಗೆ ನಟ ರಾಮ್ ಪೋತಿನೇನಿ ರೆಡಿ!

ಇತ್ತೀಚೆಗೆ, 'ಅಖಂಡ' ಸಿನಿಮಾ ಮೂಲಕ ಒಂದು ಬ್ಲಾಕ್ ಬಸ್ಟರ್ ಚಿತ್ರ ಕೊಟ್ಟ ನಿರ್ದೇಶಕ ಬೋಯಪಾಟಿ ಶ್ರೀನು ಅವರು ಇದೀಗ ಒಂದು ಪ್ಯಾನ್ ಇಂಡಿಯಾ ಸಿನಿಮಾಗೆ ನಿರ್ದೇಶನ ಮಾಡಲು ರೆಡಿಯಾಗಿದ್ದಾರೆ. ತೆಲುಗಿನ ಖ್ಯಾತ ಹೀರೋ ರಾಮ್ ಪೋತಿನೇನಿ, ನಿರ್ಮಾಪಕ ಶ್ರೀನಿವಾಸ ಚಿತ್ತೂರಿ ಅವರ ಜೊತೆಗೂಡಿ ಬೋಯಪಾಟಿ ಪ್ಯಾನ್ ಇಂಡಿಯಾ ಸಿನಿಮಾ ಮಾಡಲಿದ್ದಾರಂತೆ.
ಈಗಾಗಲೇ, ನಿರ್ಮಾಪಕ ಶ್ರೀನಿವಾಸ ಚಿತ್ತೂರಿ ತಮ್ಮದೇ ಬ್ಯಾನರ್‌ನ ಅಡಿಯಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ಬ್ಲಾಕ್‌ಬಸ್ಟರ್‌ ಚಿತ್ರಗಳನ್ನು ನೀಡಿದ್ದು, ಸದ್ಯ ರಾಮ್ ಪೋತಿನೇನಿ ಅಭಿನಯದ ಮತ್ತು ಎನ್ ಲಿಂಗುಸಾಮಿ ನಿರ್ದೇಶನದ 'ದಿ ವಾರಿಯರ್' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಈ ಸಿನಿಮಾದ ಬಿಡುಗಡೆಯ ಮುನ್ನವೇ ನಟ ರಾಮ್ ಜತೆ ಮತ್ತೊಂದು ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ.
ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ನಟ ರಾಮ್ ಈಗ ಬೋಯಪಾಟಿ ಶ್ರೀನು ಜೊತೆ ಕೈ ಜೋಡಿಸಿದ್ದು, ಒಂದು ದೊಡ್ಡ ಮೆಗಾ ಪ್ರಾಜೆಕ್ಟ್ ಸಿನಿಮಾ ತಯಾರಾಗಲಿದೆ ಎಂಬುದರಲ್ಲಿ ಎರಡನೇ ಮಾತಿಲ್ಲ. ಈ ಹೊಸ ಸಿನಿಮಾದ ಬಗ್ಗೆ ಅನೌನ್ಸ್ ಮಾಡಿರುವ ಬೋಯಪಾಟಿ, ಶೀಘ್ರದಲ್ಲೇ ಚಿತ್ರದ ಟೈಟಲ್, ಪಾತ್ರವರ್ಗ,ಶೂಟಿಂಗ್ ಹೀಗೆ ಹಲವು ವಿಚಾರಗಳ ಬಗ್ಗೆ ಮಾಹಿತಿ ಮುಂಬರುವ ದಿನಗಳಲ್ಲಿ ನೀಡಲಿದ್ದಾರಂತೆ.