ಸಿನಿವಾಣಿ

ರಶ್ಮಿಕಾ ಹುಟ್ಟುಹಬ್ಬಕ್ಕೆ ವಿಶೇಷ ವಿಡಿಯೋ ಮೂಲಕ ಶುಭಕೋರಿದ ರಕ್ಷಿತ್​ ಶೆಟ್ಟಿ!

ಬೆಂಗಳೂರು: ಕಿರಿಕ್​ ಪಾರ್ಟಿ ಚಿತ್ರದ ಜತೆಯಲ್ಲೇ ಪ್ರೀತಿಯಲ್ಲಿ ಬಿದ್ದು, ಚಿತ್ರ ಯಶಸ್ಸಿನ ಬೆನ್ನಲ್ಲೇ ನಿಶ್ಚಿತಾರ್ಥ ಮಾಡಿಕೊಂಡು ಕೇವಲ ಒಂದೇ ವರ್ಷದಲ್ಲಿ ಬ್ರೇಕ್​ ಮಾಡಿಕೊಂಡು ಅಭಿಮಾನಿಗಳಿಗೆ ಶಾಕ್​ ನೀಡಿದ್ದ ಕ್ಯೂಟ್​ ಕಪಲ್​ ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ, ಅಂದಿನಿಂದ ಇಂದಿನವರೆಗೂ ಜತೆಯಾಗಿ ಕಾಣಿಸಿಕೊಂಡಿಲ್ಲ.

ಬ್ರೇಕ್​ ಆದ ಮೇಲೆ ಇಬ್ಬರ ನಡುವಿನ ಸಂಬಂಧವೂ ಹಳಸಿದೆ ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ, ಚಿತ್ರ ಬಿಡುಗಡೆ, ಹುಟ್ಟುಹಬ್ಬ ಸಂಭ್ರಮದಲ್ಲಿ ಪರಸ್ಪರ ಶುಭಾಶಯಗಳನ್ನು ವಿನಿಯಮ ಮಾಡಿಕೊಳ್ಳುವ ಮೂಲಕ ನಾವು ಚೆನ್ನಾಗಿದ್ದೇವೆ ಎಂಬ ಸಂದೇಶವನ್ನು ಇಬ್ಬರು ರವಾನಿಸುತ್ತಾರೆ.

ಇಂದು ರಶ್ಮಿಕಾ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ರಕ್ಷಿತ್​ ಶೆಟ್ಟಿ ಟ್ವೀಟ್​ ಮೂಲಕ ಶುಭಕೋರಿದ್ದಾರೆ. ಕಿರಿಕ್​ ಪಾರ್ಟಿ ಚಿತ್ರದ ಆಡಿಷನ್​ ಸಮಯದ ಒಳ್ಳೆಯ ಕ್ಷಣಗಳ ವಿಡಿಯೋವನ್ನು ಶೇರ್​ ಮಾಡಿಕೊಂಡಿರುವ ರಕ್ಷಿತ್​, ಅಂದಿನಿಂದ ನೀವು ಇಲ್ಲಿಯವರೆಗೆ ಪ್ರಯಾಣ ಮಾಡಿದ್ದೀರಿ, ನಿಮ್ಮ ಕನಸುಗಳನ್ನು ನಿಜವಾದ ಹೋರಾಟಗಾರ್ತಿಯಂತೆ ಹಿಂಬಾಲಿಸಿದ್ದೀರಿ. ಹೆಮ್ಮೆಯ ಹುಡುಗಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದಿರುವ ರಕ್ಷಿತ್​, ಮತ್ತಷ್ಟು ಯಶಸ್ಸು ನಿಮಗೆ ಸಿಗಲಿ ಎಂದು ಹಾರೈಸಿದ್ದಾರೆ.

ಇನ್ನು ರಕ್ಷಿತ್​ ಮಾಡಿರುವ ಟ್ವೀಟ್​ಗೆ ರಶ್ಮಿಕಾ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ಇನ್ನು ರಶ್ಮಿಕಾ ಹುಟ್ಟುಹಬ್ಬಕ್ಕೆ ಸಾಕಷ್ಟು ಕಲಾವಿದರು ಶುಭಕೋರುತ್ತಿದ್ದಾರೆ. ಸಿನಿಮಾ ವಿಚಾರಕ್ಕೆ ಬಂದರೆ, ಇತ್ತೀಚೆಗಷ್ಟೇ ನಟ ಕಾರ್ತಿಕ್​ ಜತೆ ನಟಿಸಿರುವ ಸುಲ್ತಾನ್ ಚಿತ್ರ ತೆರಕಂಡಿದ್ದು, ಅದ್ಭುತ ಪ್ರದರ್ಶನ ಕಾಣುತ್ತಿದೆ.