ಸಿನಿವಾಣಿ

ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಇನ್ನಿಲ್ಲ! Rakesh Poojary

Rakesh Poojary : ಜನಪ್ರಿಯ ಹಾಸ್ಯ ಕಾರ್ಯಕ್ರಮ ಕಾಮಿಡಿ ಕಿಲಾಡಿಗಳು ಮೂಲಕ ಕರ್ನಾಟಕದಾದ್ಯಂತ ಜನರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ದಿಢೀರ್​ ಸಾವಿಗೀಡಾಗಿದ್ದಾರೆ. ರಾಕೇಶ್​ ಅವರು ಕಾಮಿಡಿ ಕಿಲಾಡಿಗಳು 3ನೇ ಆವೃತ್ತಿಯ ವಿನ್ನರ್​ ಆಗಿದ್ದರು. ಇದೀಗ ಅವರ ಅಕಾಲಿಕ ಮರಣ ಇಡೀ ಮನರಂಜನಾ ಉದ್ಯಮಕ್ಕೆ ದೊಡ್ಡ ಶಾಕ್​ ಆಗಿದೆ.

ರಾಕೇಶ್​ ಪೂಜಾರಿ ಅವರ ಸಾವಿನ ಸುದ್ದಿಯನ್ನು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ತೀರ್ಪುಗಾರರಲ್ಲಿ ಒಬ್ಬರಾದ ನಟಿ ರಕ್ಷಿತಾ ಪ್ರೇಮ್​ ಖಚಿತ ಪಡಿಸಿದ್ದಾರೆ. ರಾಕೇಶ್​ ಜೊತೆ ಇನ್ನು ಮುಂದೆ ಮಾತನಾಡಲು ಸಾಧ್ಯವಾಗುವುದಿಲ್ಲ ಅಂತ ನನಗೆ ನಂಬೋಕೆ ಆಗ್ತಿಲ್ಲ. ಕಾಮಿಡಿ ಕಿಲಾಡಿಗಳು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಕಾರ್ಯಕ್ರಮ. ರಾಕೇಶ ಯಾವಾಗಲೂ ಉಳಿದವರಿಗಿಂತ ಭಿನ್ನವಾಗಿ ನಿಲ್ಲುತ್ತಿದ್ದ ವ್ಯಕ್ತಿ. ಅತ್ಯಂತ ಸುಂದರ ವ್ಯಕ್ತಿ ಆತ. ಕ್ಯಾಮೆರಾದ ಹೊರಗಡೆ ಕೂಡ ಆತ ಅದ್ಭುತ ಪ್ರತಿಭೆ. ಅತ್ಯಂತ ಪರಿಪೂರ್ಣ ವ್ಯಕ್ತಿ. ರಾಕೇಶ, ನೀವು ಯಾವಾಗಲೂ ನಮ್ಮ ಹೃದಯದಲ್ಲಿ ಇರುತ್ತೀರಿ ಮತ್ತು ಎಲ್ಲರೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಾರೆ. ನಿಮ್ಮ ನಗು, ನಿಮ್ಮ ತುಂಟತನ ಹಾಗೂ ಮುಖ್ಯವಾಗಿ ನೀವು ನಮ್ಮೆಲ್ಲರ ಜೀವನದಲ್ಲಿ ತಂದ ಸಂತೋಷಕ್ಕೆ ಧನ್ಯವಾದಗಳು ರಾಕೇಶ ಎಂದು ರಕ್ಷಿತಾ ಅವರು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ರಾಕೇಶ್​ ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ‌ ನಿಟ್ಟೆ ಗ್ರಾಮಕ್ಕೆ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಆಗಿದೆ ಎನ್ನಲಾಗುತ್ತಿದೆ. ಕೆಲವು ವರದಿಗಳ ಪ್ರಕಾರ ಲೋ ಬಿಪಿಯಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಸಾವಿನ ಕುರಿತು ಇನ್ನು ನಿಖರ ಮಾಹಿತಿ ಬಂದಿಲ್ಲ. ಮೇ 12ರ ಮುಂಜಾನೆ 2 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ರಾಕೇಶ್​ ಅವರ ಅಕಾಲಿಕ ಮರಣಕ್ಕೆ ಅವರ ಆಪ್ತ ಬಳಗ ಶಾಕ್ ಆಗಿದೆ.

ಅಂದಹಾಗೆ ರಾಕೇಶ್ ಅವರು ತಮ್ಮ ನಟನಾ ಪಯಣ ಆರಂಭಿಸಿದ್ದು ಚೈತನ್ಯ ಕಲಾವಿದರು ನಾಟಕ ತಂಡದ ಮೂಲಕ. ರಾಕೇಶ್​ ತುಂಬಾ ಪ್ರತಿಭಾವಂತನಾಗಿದ್ದರಿಂದ 2014ರಲ್ಲಿ ‘ಕಡ್ಲೆ ಬಜಿಲ್’ ಎಂಬ ತುಳು ರಿಯಾಲಿಟಿ ಶೋನಲ್ಲಿ ಅವಕಾಶ ಸಿಕ್ಕಿತು. ಈ ಶೋ ಮೂಲಕ ಜನರ ಮನಸ್ಸಿನಲ್ಲಿ ಸ್ಥಾನ ಪಡೆದರು. ಇದಾದ ಬಳಿಕ ರಾಕೇಶ್ ಅವರು 2018ರಲ್ಲಿ ಜೀ ಕನ್ನಡ ‘ಕಾಮಿಡಿ ಕಿಲಾಡಿಗಳು ಸೀಸನ್ 2’ ಶೋಗೆ ಸೆಲೆಕ್ಟ್ ಆದರು. ತಮ್ಮ ಹಾಸ್ಯದ ಮೂಲಕವೇ ಕನ್ನಡಿಗರ ಮನದಲ್ಲಿ ತಮ್ಮದೇಯಾದ ಸ್ಥಾನ ಪಡೆದರು. ಅವರ ಹಾಸ್ಯವು ಕರ್ನಾಟಕದ ಪ್ರತಿ ಮನೆಯನ್ನು ತಲುಪಿತು. ಇದರಿಂದ ಸಿನಿಮಾ ಅವಕಾಶಗಳು ಕೂಡ ಸಿಕ್ಕವು. ಕಾಮಿಡಿ ಕಿಲಾಡಿಗಳು 2ನೇ ಆವೃತ್ತಿಯಲ್ಲಿ ರನ್ನರ್ ಅಪ್ ತಂಡದ ಸದಸ್ಯರಾಗಿದ್ದರು. ಇದಾದ ಬಳಿಕ 2020ರಲ್ಲಿ ‘ಕಾಮಿಡಿ ಕಿಲಾಡಿಗಳು ಸೀಸನ್ 3’ ವಿಜೇತರಾಗಿ ಹೊರ ಹೊಮ್ಮಿದರು.