ಸಿನಿವಾಣಿ

ಮಾಸ್​ ಎಂಟ್ರಿ ಕೊಡಲು ಸಜ್ಜಾದ ರಾಜವರ್ಧನ್​ ...

'ಬಿಚ್ಚುಗತ್ತಿ' ಚಿತ್ರದ ನಂತರ ರಾಜವರ್ಧನ್​ ಸದ್ದಿಲ್ಲದೆ ಇನ್ನೂ ಒಂದು ಚಿತ್ರದಲ್ಲಿ ನಟಿಸುತ್ತಿದ್ದು, ಅದರ ಚಿತ್ರೀಕರಣ ಇನ್ನಷ್ಟೇ ಮುಗಿಯಬೇಕಿದೆ. ಈ ಮಧ್ಯೆ, ಅವರು ಇನ್ನೂ ಒಂದು ಚಿತ್ರವನ್ನು ಒಪ್ಪಿಕೊಂಡಿದ್ದು, ಈ ಬಾರಿ ಸಖತ್​ ಮಾಸ್​ ಆಗಿ ಎಂಟ್ರಿ ಕೊಡುವುದಕ್ಕೆ ಅವರು ಸಜ್ಜಾಗುತ್ತಿದ್ದಾರೆ.

ರಾಜವರ್ಧನ್​ ಈ ಹಿಂದೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರಾದರೂ, ಯಾವ ಚಿತ್ರದಲ್ಲೂ ಮಾಸ್​ ಲುಕ್​ನಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಕುಮರೇಶ್​ ನಿರ್ದೇಶನದ ಹೆಸರಿಡದ ಚಿತ್ರವೊಂದರಲ್ಲಿ ಅವರು ಮಾಸ್​ ಹೀರೋ ಆಗಿ ನಟಿಸುತ್ತಿರುವುದಷ್ಟೇ ಅಲ್ಲ, 'ಮಾಸಿವ್​ ಸ್ಟಾರ್​' ಎಂಬ ಬಿರುದಿನೊಂದಿಗೆ ಎಂಟ್ರಿಕೊಡುತ್ತಿದ್ದಾರೆ.

ಈ ಹೆಸರಿಡದ ಚಿತ್ರದ ಫಸ್ಟ್​ ಲುಕ್​ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಅಷ್ಟೇ ಅಲ್ಲ, ಚಿತ್ರದ ಹೆಸರನ್ನು ಸದ್ಯದಲ್ಲೇ ಅನಾವರಣಗೊಳಿಸಲಾಗುತ್ತದೆ. ಸದ್ಯಕ್ಕೆ 'ಪ್ರೊಡಕ್ಷನ್​ ನಂಬರ್​ 1' ಹೆಸರಿನಲ್ಲಿ ಚಿತ್ರದ ಕೆಲಸಗಳು ಶುರುವಾಗಿದ್ದು, ಈ ಚಿತ್ರ ಕನ್ನಡವಷ್ಟೇ ಅಲ್ಲ, ಏಕಕಾಲದಲ್ಲಿ ತಮಿಳಿನಲ್ಲೂ ನಿರ್ಮಾಣವಾಗುತ್ತಿದೆ.

ಕುಮರೇಶ್​ ಈ ಹಿಂದೆ, 'ಆ ದಿನಗಳು' ಚೇತನ್​ ಮತ್ತು ರಾಜವರ್ಧನ್​ ಅಭಿನಯದಲ್ಲಿ 'ನೂರೊಂದು ನೆನಪು' ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಒಂದು ಗ್ಯಾಪ್​ನ ನಂತರ ಅವರು ಈ ಚಿತ್ರ ನಿರ್ದೇಶಿಸುತ್ತಿದ್ದು, ಒಂದು ದೊಡ್ಡ ಹಗರಣವನ್ನುಆಧರಿಸಿ ಈ ಚಿತ್ರವನ್ನು ರೂಪಿಸುತ್ತಿದ್ದಾರೆ.