ದೆಹಲಿ: 'ಬಾಹುಬಲಿ' ಖ್ಯಾತಿಯ ನಿರ್ದೇಶಕ ಎಸ್.ಎಸ್. ರಾಜಮೌಳಿ, ಸೋಷಿಯಲ್ ಮೀಡಿಯಾ ಮೂಲಕ ಆಗಾಗ ತಮ್ಮ ಚಿತ್ರಗಳ ಅಪ್ಡೇಟ್ಗಳನ್ನು ಕೊಡುತ್ತಿರುತ್ತಾರೆ. ಆದರೆ, ಶುಕ್ರವಾರ ಬೆಳಿಗ್ಗೆ ಅವರು ಬೇರೆಯದೇ ವಿಷಯವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ದಾಖಲಿಸಿದ್ದಾರೆ.
ದೆಹಲಿ ಏರ್ಪೋರ್ಟ್ನ ಅವ್ಯವಸ್ಥೆಯ ಕುರಿತು ರಾಜಮೌಳಿ ಬೆಳಕು ಚೆಲ್ಲಿದ್ದು, ಅಲ್ಲಿನ ವ್ಯವಸ್ಥೆ ಸರಿಪಡಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಇಲ್ಲವಾದರೆ, ಹೊರದೇಶದವರಿಗೆ ಭಾರತದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವ ಸಾಧ್ಯತೆ ಇದೆ ಎಂದು ಅವರು ಬೇಸರಿಸಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಇಂದು ಬೆಳಿಗ್ಗೆ ಲುಫ್ತಾನ್ಸಾ ಫ್ಲೈಟ್ನಿಂದ ದೆಹಲಿಗೆ ಬಂದೆ. ಎಲ್ಲರಿಗೆ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳಲು ಮತ್ತು ಮಾಹಿತಿ ಸಂಗ್ರಹಿಸಲು, ಫಾರ್ಮ್ಗಳನ್ನು ನೀಡಲಾಗಿತ್ತು. ಜನರೆಲ್ಲ ನೆಲದ ಮೇಲೆ ಕುಳಿತು ಅಥವಾ ಗೋಡೆಯ ಮೇಲೆ ಫಾರ್ಮ್ಗಳನ್ನಿಟ್ಟುಕೊಂಡು ಬರೆಯುತ್ತಿದ್ದರು. ಕನಿಷ್ಠ ಟೇಬಲ್ ವ್ಯವಸ್ಥೆ ಇಲ್ಲ. ಇನ್ನು ಎಕ್ಸಿಟ್ ಗೇಟ್ ಬಳಿ ಬೀದಿನಾಯಿಗಳು ಅಡ್ಡಾಡುತ್ತಿವೆ. ಹೊರಗಿನಿಂದ ಬಂದ ಯಾತ್ರಿಕರಿಗೆ ಇದರಿಂದ ನಮ್ಮ ದೇಶದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವ ಸಾಧ್ಯತೆ ಇದೆ. ದಯವಿಟ್ಟು ಅತ್ತ ಗಮನಹರಿಸಿ' ಎಂದು ಅವರು ಸಲಹೆ ನೀಡಿದ್ದಾರೆ.
ಇನ್ನು, ರಾಜಮೌಳಿ ನಿರ್ದೇಶನದ 'ಆರ್ಆರ್ಆರ್' ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಎರಡು ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ಜ್ಯೂನಿಯರ್ ಎನ್ಟಿಆರ್ ಮತ್ತು ರಾಮ್ಚರಣ್ ಮೊದಲ ಬಾರಿಗೆ ಜತೆಯಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಅಜಯ್ ದೇವಗನ್, ಆಲಿಯಾ ಭಟ್, ಮುಂತಾದವರು ನಟಿಸಿದ್ದಾರೆ.