ಸಿನಿವಾಣಿ

ಕೆರೆಬೇಟೆಗೆ ರೆಡಿಯಾದ ಗೌರಿಶಂಕರ್ ; ತೆರೆಯ ಮೇಲೆ ಬರಲಿದೆ ಮತ್ತೊಂದು ಮಲೆನಾಡಿನ ಕಥೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಮಲೆನಾಡಿನಲ್ಲಿ ಬೇಸಗೆ ಸಮಯದಲ್ಲಿ ಕೆರೆಯ ನೀರು ಕಡಿಮೆಯಾದಾಗ, ಸಾವಿರಾರು ಜನ ಕೂಣಿ ಮತ್ತು ಜರಡಿ ಬಲೆಗಳನ್ನು ಹಿಡಿದು ಮೀನುಗಳ ಬೇಟೆಯಾಡಲು ಕೆರೆಗೆ ಇಳಿಯುತ್ತಾರೆ. ಈ ಸಂಪ್ರದಾಯವನ್ನು ‘ಕೆರೆಬೇಟೆ’ ಎನ್ನುತ್ತಾರೆ. ಇದೀಗ ಇದೇ ಶೀರ್ಷಿಕೆಯೊಂದಿಗೆ ‘ಜೋಕಾಲಿ’, ‘ರಾಜಹಂಸ’ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದ ಗೌರಿಶಂಕರ್, ಸಿನಿಮಾ ಮಾಡಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸುವಂತಿದೆ.

ಪವನ್ ಒಡೆಯರ್, ಎ.ಆರ್. ಬಾಬು ಗರಡಿಯಲ್ಲಿ ಪಳಗಿರುವ ರಾಜಗುರು ಬಿ., ‘ಕೆರೆಬೇಟೆ’ಯ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ವಿಶೇಷ ಅಂದರೆ ಈ ಚಿತ್ರದಕ್ಕೆ ನಾಯಕ ಗೌರಿಶಂಕರ್ ಅವರೇ ಸಂಭಾಷಣೆ ಬರೆದಿದ್ದಾರೆ. ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಬಿಂದು ಶಿವರಾಮ್ ಈ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್ ಡೆಬ್ಯೂ ಮಾಡುತ್ತಿದ್ದಾರೆ. ಜತೆಗೆ ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್, ವರ್ಧನ್ ತೀರ್ಥಹಳ್ಳಿ, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು ಪ್ರಮುಖ ತಾರಾಗಣದಲ್ಲಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಿಗಂದೂರು, ಸೊರಬ ಸುತ್ತಮುತ್ತ 65 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು, ನವೆಂಬರ್‌ನಲ್ಲಿ ಕೊನೆಯ ಹಂತದ ಶೂಟಿಂಗ್‌ಗೆ ಚಿತ್ರತಂಡ ಯೋಜನೆ ರೂಪಿಸಿದೆ. ‘ಕೆರೆಬೇಟೆ’ಗೆ ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣವಿರಲಿದೆ.