ಸಿನಿವಾಣಿ

ಪಿ2 ಪ್ರೊಡಕ್ಷನ್ಸ್ ಹೊಸ ಚಿತ್ರದಲ್ಲಿ ರಾಜ್​ವರ್ಧನ್

ಬೆಂಗಳೂರು: ರಾಜ್​ವರ್ಧನ್ ಅಭಿನಯದ ‘ಬಿಚ್ಚುಗತ್ತಿ’ ಫೆಬ್ರವರಿಯಲ್ಲಿ ಬಿಡುಗಡೆಯಾಗಿ, ಮೆಚ್ಚುಗೆ ಪಡೆದಿದ್ದು ಗೊತ್ತೇ ಇದೆ. ಆ ಚಿತ್ರದ ನಂತರ ಅವರು ಈಗೇನು ಮಾಡುತ್ತಿದ್ದಾರೆ, ಹೊಸದಾಗಿ ಯಾವ ಸಿನಿಮಾ ಒಪ್ಪಿಕೊಂಡಿದ್ದಾರೆ ಎಂಬ ಕುತೂಹಲ ಸಹಜ. ‘ಬಿಚ್ಚುಗತ್ತಿ’ ಬಿಡುಗಡೆಯಾದ ಮೇಲೆ ರಾಜ್​ವರ್ಧನ್ ಹೊಸ ಚಿತ್ರದಲ್ಲಿ ಅಭಿನಯಿಸುವುದಕ್ಕೆ ಇನ್ನಷ್ಟೇ ಗ್ರೀನ್​ಸಿಗ್ನಲ್ ಕೊಡಬೇಕಿದೆ. ಆದರೆ, ‘ಬಿಚ್ಚುಗತ್ತಿ’ ಮುನ್ನವೇ ಅವರೊಂದು ಚಿತ್ರ ಒಪ್ಪಿದ್ದು, ಈಗಾಗಲೇ ಆ ಚಿತ್ರದ ಒಂದು ಹಂತದ ಚಿತ್ರೀಕರಣ ಸಹ ಮುಗಿದಿದೆ.

ಹೌದು, ರಾಜ್​ವರ್ಧನ್ ಸದ್ದಿಲ್ಲದೆ ಒಂದು ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಪಿ2 ಪ್ರೊಡಕ್ಷನ್ಸ್​ನಡಿ ಪರಮೇಶ್ ಮತ್ತು ಪ್ರೇಮ್ ನಿರ್ವಿುಸುತ್ತಿದ್ದಾರೆ. ಈ ಹಿಂದೆ ‘ಗಣಪ’, ‘ಪಲ್ಲಕ್ಕಿ’, ‘ಪಾರಿಜಾತ’ ಮುಂತಾದ ಚಿತ್ರಗಳನ್ನು ನಿರ್ವಿುಸಿರುವ ಪರಮೇಶ್ ಮತ್ತು ಪ್ರೇಮ್ ಇದೀಗ ರಾಜ್​ವರ್ಧನ್ ಅಭಿನಯದಲ್ಲಿ ಹೊಸ ಚಿತ್ರವನ್ನು ಪ್ರಾರಂಭಿಸಿದ್ದಾರೆ. ಈಗಾಗಲೇ ಮೂಡಿಗೆರೆ ಮುಂತಾದ ಕಡೆ ಒಂದು ಹಂತದ ಚಿತ್ರೀಕರಣ ಸಹ ಆಗಿದೆ. ಅಷ್ಟರಲ್ಲಿ ‘ಬಿಚ್ಚುಗತ್ತಿ’ ಚಿತ್ರವು ಬಿಡುಗಡೆಗೆ ಬಂದಿದ್ದರಿಂದ, ಅದರ ಪ್ರಮೋಷನ್​ಗಾಗಿ ಅವರು ರಜೆ ತೆಗೆದುಕೊಂಡಿದ್ದಾರೆ. ಎಲ್ಲ ಮುಗಿದು, ಇನ್ನೇನು ಎರಡನೆಯ ಹಂತದ ಚಿತ್ರೀಕರಣ ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಕರೊನಾ ಭೀತಿಯಿಂದ ಚಿತ್ರರಂಗವೇ ಬಂದ್ ಆಗಿದೆ. ಎಲ್ಲವೂ ಒಂದು ಹಂತಕ್ಕೆ ಬಂದು ಚಿತ್ರೀಕರಣ ಪ್ರಾರಂಭವಾಗುತ್ತಿದ್ದಂತೆಯೇ, ಈ ಹೊಸ ಚಿತ್ರದ ಚಿತ್ರೀಕರಣ ಸಹ ಶುರುವಾಗಲಿದೆ.

ಈ ಮಧ್ಯೆ, ಅವರು ಒಂದಿಷ್ಟು ಕಥೆಗಳನ್ನು ಕೇಳುತ್ತಿದ್ದಾರಂತೆ. ‘ಇತ್ತೀಚಿನ ದಿನಗಳಲ್ಲಿ ಕೆಲವು ಕಥೆಗಳನ್ನ ಕೇಳಿದೆ. ಈ ಪೈಕಿ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಅವರು ಹೇಳಿದ ಒನ್​ಲೈನ್ ಬಹಳ ಇಷ್ಟವಾಗಿದೆ. ತುಂಬ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ ಅವರು. ಆದರೆ, ‘ಬಿಚ್ಚುಗತ್ತಿ’ಯ ತರಹವೇ ಆ ಚಿತ್ರಕ್ಕೂ ಒಂದಿಷ್ಟು ತಯಾರಿಬೇಕು. ಆ ಚಿತ್ರ ಒಪು್ಪವ ಸಾಧ್ಯತೆ ಇದೆ’ ಎನ್ನುತ್ತಾರೆ ರಾಜ್​ವರ್ಧನ್.

ಇನ್ನು ‘ಬಿಚ್ಚುಗತ್ತಿ - ಚಾಪ್ಟರ್ ಒಂದು - ದಳವಾಯಿ ದಂಗೆ’ ಚಿತ್ರದ ಸಂದರ್ಭದಲ್ಲೇ ಅದರ ಮುಂದುವರಿದ ಭಾಗ ಬರುತ್ತದೆ ಎಂದು ಹೇಳಲಾಗಿತ್ತು. ಹೆಸರೇ ಹೇಳುವಂತೆ ಚಿತ್ರದಲ್ಲಿ ಒಂದು ಅಧ್ಯಾಯವನ್ನು ಮಾತ್ರ ತೋರಿಸಲಾಗಿದೆ. ಇನ್ನೊಂದು ಭಾಗ ಬಿಡುಗಡೆಯಾಗಬೇಕಿದೆ. ಹಾಗಾದರೆ, ‘ಬಿಚ್ಚುಗತ್ತಿ - ಚಾಪ್ಟರ್ ಟೂ’ ಯಾವಾಗ ಎಂಬ ಪ್ರಶ್ನೆ ಬರದೇ ಇರದು. ಈ ವಿಷಯವಾಗಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಸಹ ಫೋನ್ ಮಾಡಿ, ಚಿತ್ರವನ್ನು ಮುಂದುವರಿಸುವ ಸಲಹೆ ನೀಡಿದರಂತೆ. ‘ಸ್ವಾಮೀಜಿ ಫೋನ್ ಮಾಡಿದ್ದರು. ಚಿತ್ರವನ್ನು ಮುಂದುವರಿಸುವುದಕ್ಕೆ ಸಲಹೆ ನೀಡಿದರು. ನಮಗೂ ಆ ಚಿತ್ರ ಮಾಡುವ ಆಸೆ ಇದೆ. ಮುಂದುವರಿದ ಭಾಗದ ಕಥೆ ಅದ್ಭುತವಾಗಿದೆ. ಅವರು ಚಿತ್ರದುರ್ಗಕ್ಕೆ ಕರೆದಿದ್ದಾರೆ. ಸದ್ಯದಲ್ಲೇ ಹೋಗಿ ಮಾತನಾಡಿ ಬರಬೇಕು. ಬಹುಶಃ ಈ ವರ್ಷದ ಕೊನೆಯ ಹೊತ್ತಿಗೆ ಈ ವಿಷಯವಾಗಿ ಏನಾದರೂ ಸ್ಪಷ್ಟತೆ ಸಿಗಬಹುದು’ ಎನ್ನುತ್ತಾರೆ ರಾಜ್​ವರ್ಧನ್.