ಬೆಂಗಳೂರು: ‘ಬೆಳಕು’ ಎಂಬ ಚಿತ್ರದಲ್ಲಿ ನಟಿಸಿದ್ದೇ ಕೊನೆ, ಆ ನಂತರ ಯಾವೊಂದು ಚಿತ್ರ ಸಹ ಒಪ್ಪಿಕೊಂಡಿರಲಿಲ್ಲ ರಾಘವೇಂದ್ರ ರಾಜಕುಮಾರ್. ಈಗ ಅವರು ‘ರಾಜಿ’ ಎಂಬ ಹೊಸ ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ಡಿ. 10ರಂದು ಚಿತ್ರದ ಮುಹೂರ್ತ ನಡೆಯಲಿದೆ.
‘ರಾಜಿ’ ಎಂದರೆ ಒಪ್ಪಂದ ಮಾಡಿಕೊಳ್ಳುವುದು ಎಂದು ಎಲ್ಲರಿಗೂ ಗೊತ್ತೇ ಇದೆ. ಚಿತ್ರ ಇದೇ ವಿಷಯದ ಸುತ್ತ ಸುತ್ತುತ್ತದೆ. ‘ಒಂದು ಸುಂದರ ಒಪ್ಪಂದ’ ಎಂಬ ಉಪ-ಶೀರ್ಷಿಕೆ ಇರುವ ಈ ಚಿತ್ರದಲ್ಲಿ ಮನುಷ್ಯ ರಾಜಿ ಆದರೆ ಜೀವನ ಸುಂದರ ಎಂಬ ಸಂದೇಶ ಇದೆಯಂತೆ. ಅಷ್ಟು ಮಾತ್ರವಲ್ಲ. ಚಿತ್ರವು ರಾಘವ-ಜೀವಿತ ಎಂಬ ದಂಪತಿಯ ಸುತ್ತ ಸುತ್ತುವುದರಿಂದ, ಅವರಿಬ್ಬರ ಹೆಸರಿನ ಮೊದಲಕ್ಷರಗಳನ್ನು ಸೇರಿಸಿ ಚಿತ್ರಕ್ಕೆ ಹೆಸರಿಡಲಾಗಿದೆ. ಇಲ್ಲಿ ರಾಘವೇಂದ್ರ ರಾಜಕುಮಾರ್ ಅವರಿಗೆ ಜೋಡಿಯಾಗಿ ಪ್ರೀತಿ ಎಸ್.ಬಾಬು ನಟಿಸುತ್ತಿದ್ದು, ನಟನೆಯ ಜತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಇದಕ್ಕೂ ಮುನ್ನ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಪ್ರೀತಿ ಅವರಿಗೆ, ಇದು ಮೊದಲ ನಿರ್ದೇಶನದ ಚಿತ್ರ.
ವಿಶೇಷವೆಂದರೆ, ಈ ಚಿತ್ರವು ವಸುಮತಿ ಉಡುಪ ಅವರ ‘ಪತಿವ್ರತೆಗೆ ಕಿರೀಟಗಳೆಷ್ಟೋ’ ಎಂಬ ಕಥೆಯನ್ನು ಆಧರಿಸಿದೆ. ಈ ಕಥೆಯನ್ನು ಆಧರಿಸಿ ಎಸ್. ಹರೀಶ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಇದಕ್ಕೂ ಮುನ್ನ 35ಕ್ಕೂ ಹೆಚ್ಚು ಚಿತ್ರಗಳಿಗೆ ನಿರ್ದೇಶನ ಮಾಡಿರುವ ಮತ್ತು ‘ರಾಜತಂತ್ರ’ ಎಂಬ ಚಿತ್ರವನ್ನೂ ನಿರ್ದೇಶಿಸಿದ್ದ ಪಿ.ವಿ.ಆರ್. ಸ್ವಾಮಿ ಈ ಚಿತ್ರದ ಛಾಯಾಗ್ರಹಣ ಮತ್ತು ನೇತೃತ್ವ ವಹಿಸಿಕೊಂಡಿದ್ದಾರೆ. ಉಪಾಸನ ಮೋಹನ್ ಸಂಗೀತ, ಮೈಸೂರಿನ ಬಸವರಾಜ್ ಎಸ್ ಈ ಚಿತ್ರವನ್ನು ನಿರ್ವಿುಸುತ್ತಿದ್ದಾರೆ. ಮಿಕ್ಕಂತೆ ಪ್ರತಾಪ್ ಸಿಂಹ, ಎಂ.ಡಿ. ಕೌಶಿಕ್, ಎಸ್. ಬಸವರಾಜು, ಎಸ್. ಕುಮಾರ್, ಆಡುಗೋಡಿ ಶ್ರೀನಿವಾಸ್ ಮುಂತಾದವವರು ಈ ಚಿತ್ರದಲ್ಲಿ ನಟಿಸಿದ್ದಾರೆ.