ಸಿನಿವಾಣಿ

ಹೊಸ ತಂತ್ರ ಮಾಡುತ್ತಿದ್ದಾರೆ ರಾಘವೇಂದ್ರ ರಾಜಕುಮಾರ್​

ರಾಘವೇಂದ್ರ ರಾಜಕುಮಾರ್​ ಕಳೆದ ಎರಡು ವರ್ಷಗಳಿಂದ ಹಲವು ಚಿತ್ರಗಳಲ್ಲಿ ನಟಿಸುತ್ತಲೇ ಇದ್ದಾರೆ. 'ಅಮ್ಮನ ಮನೆ' ನಂತರ 'ತ್ರಯಂಬಕಂ', 'ವಾರ್ಡ್​ ನಂ 11', 'ಪೊಗರು', 'ಆಡಿಸಿದಾತ' ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿರುವ ಅವರು, ಇದೀಗ ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅದೇ 'ರಾಜತಂತ್ರ'.

ಬಹುಶಃ ಕರೊನಾ ಹಾವಳಿ ಮತ್ತು ಲಾಕ್​ಡೌನ್​ ಇಲ್ಲದಿದ್ದರೆ, ಇಷ್ಟರಲ್ಲಿ ಚಿತ್ರೀಕರಣ ಪ್ರಾರಂಭವಾಗಿರಬೇಕಿತ್ತು. ಆದರೆ, ಸ್ವಲ್ಪ ತಡವಾಯಿತು. ಇದೀಗ ಚಿತ್ರೀಕರಣ ಮಾಡುವುದಕ್ಕೆ ಸರ್ಕಾರ ಅನುಮತಿ ಕೊಟ್ಟಿರುವುದರಿಂದ, ಸೆಪ್ಟೆಂಬರ್​ನಿಂದ 'ರಾಜತಂತ್ರ' ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.

ಅದಕ್ಕೂ ಮುನ್ನ ಭಾನುವಾರ, ಚಿತ್ರದ ಮೋಷನ್​ ಪೋಸ್ಟರ್​ನ್ನು ಪುನೀತ್​ ರಾಜಕುಮಾರ್​ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ರಾಘವೇಂದ್ರ ರಾಜಕುಮಾರ್​ ಅವರ ಮನೆಯಲ್ಲೇ ಡಾ. ರಾಜಕುಮಾರ್​ ಮತ್ತು ಪಾರ್ವತಮ್ಮ ರಾಜಕುಮಾರ್​ ಅವರ ಭಾವಚಿತ್ರದ ಮುಂದೆ ಪೋಸ್ಟರ್​ ಅನಾವರಣಗೊಂಡಿದೆ. ಈ ಸಂದರ್ಭದಲ್ಲಿ ವಿನಯ್​ ರಾಜಕುಮಾರ್ ಸೇರಿದಂತೆ ಚಿತ್ರತಂಡದ ಹಲವು ಸದಸ್ಯರು ಭಾಗವಹಿಸಿದ್ದರು.

ಏನಿದು 'ರಾಜತಂತ್ರ' ಎಂಬ ಪ್ರಶ್ನೆ ಬರದೇ ಇರದು. ಸಮಾಜಕ್ಕೆ ಮತ್ತು ದೇಶಕ್ಕೆ ಕಂಟಕವಾಗಿರುವ ದುಷ್ಟಶಕ್ತಿಗಳನ್ನು ತನ್ನ ಬುದ್ಧಿಶಕ್ತಿ ಮತ್ತು ತಂತ್ರಗಾರಿಕೆಯಿಂದ ಮಣಿಸುವ ವಿಭಿನ್ನ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್​ ನಟಿಸುತ್ತಿದ್ದು, ಅದೇ ಕಾರಣಕ್ಕೆ ಚಿತ್ರಕ್ಕೆ 'ರಾಜತಂತ್ರ' ಎಂಬ ಹೆಸರನ್ನು ಇಡಲಾಗಿದೆ.

ಈ ಹಿಂದೆ 'ಅಮ್ಮನ ಮನೆ' ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಪಿ.ವಿ.ಆರ್​. ಸ್ವಾಮಿ, ಈ ಚಿತ್ರದ ಛಾಯಾಗ್ರಹಣದ ಜತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ಜೆ.ಎಂ.ಪ್ರಹ್ಲಾದ್​ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಹಾಡುಗಳನ್ನು ಬರೆದಿದ್ದಾರೆ.