ಬೆಂಗಳೂರು: ಹೊಸ ವರ್ಷಕ್ಕೆ ತುಂಬ ದಿನಗಳೇನೂ ಉಳಿದಿಲ್ಲ. ಅಷ್ಟರಲ್ಲಿಯೇ ಕಳೆದ ವರ್ಷದಂತೆ ಮತ್ತೊಂದು ಕಲರ್ಫುಲ್ ಹಾಡಿನ ಮೂಲಕ ಆಗಮಿಸಲು ಸಿದ್ಧತೆಯಲ್ಲಿದ್ದಾರೆ ರ್ಯಾಪರ್ ಚಂದನ್ ಶೆಟ್ಟಿ. ವಿಶೇಷ ಏನೆಂದರೆ, ಈ ಸಲ ನಟಿ ರಚಿತಾ ರಾಮ್ ಚಂದನ್ ಜತೆ ಕೈ ಜೋಡಿಸಿದ್ದಾರೆ. ನ್ಯೂ ಇಯರ್ ಸಲುವಾಗಿ ಬರಲಿರುವ ಹಾಡಿನಲ್ಲಿ ರಚಿತಾ ಹೆಜ್ಜೆ ಹಾಕುತ್ತಿದ್ದಾರೆ.
ಈಗಾಗಲೇ ಕಲರ್ಫುಲ್ ಸೆಟ್ನಲ್ಲಿ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಈ ಹಾಡಿಗೆ ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿ, ‘ಅಲೆಲೆಲೆಲೆ ಇವ್ಳು ಚೆಂದಾಗವ್ಳೆ..’ ಎಂಬ ಸಾಹಿತ್ಯವನ್ನೂ ಬರೆದಿದ್ದಾರೆ. ಇಲ್ಲಿಯವರೆಗೂ ಸಿನಿಮಾಗಳಲ್ಲಿಯೇ ಹೆಚ್ಚು ಬಿಜಿಯಾಗಿರುತ್ತಿದ್ದ ರಚಿತಾ, ಇದೇ ಮೊದಲ ಸಲ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಆ ಹಾಡಿನ ಸಣ್ಣ ವಿಡಿಯೋ ತುಣುಕುಗಳನ್ನು ಸೋಷಿಯಲ್ ಮೀಡಿಯಾದಲ್ಲಿಯೂ ರಚಿತಾ ಹಂಚಿಕೊಂಡಿದ್ದಾರೆ.
ಹಾಡಿನಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೂ ಕಿರು ವಿಡಿಯೋಗಳಲ್ಲಿ ಉತ್ತರ ಸಿಕ್ಕಿದೆ. ಇನ್ನೇನು ಹಾಡಿನ ಚಿತ್ರೀಕರಣ ಮುಗಿಯುತ್ತಿದ್ದಂತೆ, ಈ ವಿಚಾರವನ್ನು ಸ್ವತಃ ಚಂದನ್ ಶೆಟ್ಟಿ ಅಧಿಕೃತವಾಗಿ ಘೋಷಿಸಲಿದ್ದಾರೆ. ಹೊಸ ವರ್ಷ ಅಥವಾ ಡಿಸೆಂಬರ್ ಕೊನೇ ವಾರದಲ್ಲಿ ಹಾಡು ಬಿಡುಗಡೆ ಆಗಲಿದೆ.