ಸಿನಿವಾಣಿ

ದಾಂಪತ್ಯದ ಮಹತ್ವ ಸಾರುವ 'ರಾಜಿ' ಹಾಡುಗಳ ಬಿಡುಗಡೆ

ಬೆಂಗಳೂರು: ಕಳೆದ ವರ್ಷದ ಕೊನೆಯಲ್ಲಿ ಪ್ರಾರಂಭವಾಗಿತ್ತು ರಾಘವೇಂದ್ರ ರಾಜಕುಮಾರ್​ ಅಭಿನಯದ 'ರಾಜಿ'. ಕಂಠೀರವ ಸ್ಟುಡಿಯೋದಲ್ಲಿ ಶುರುವಾದ ಈ ಚಿತ್ರ, ಈಗ ಸದ್ದಿಲ್ಲದೆ ಮುಗಿದಿದೆ. ಅಷ್ಟೇ ಅಲ್ಲ, ಏ. 28ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ, ದಾಂಪತ್ಯದ ಮಹತ್ವ ಸಾರುವ 'ರಾಜಿ' ಹಾಡುಗಳ ಬಿಡುಗಡೆ ಆಗಿದೆ.

ಕಲಾವಿದರ ಸಂಘದಲ್ಲಿ ನಡೆದ ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಶ್ರೀನಗರ ಕಿಟ್ಟಿ ಹಾಗೂ ವಿಜಯ ರಾಘವೇಂದ್ರ ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಭಾಗವಹಿಸಿ, ಚಿತ್ರಕ್ಕಾಗಿ ಉಪಾಸನಾ ಮೋಹನ್​ ಸಂಯೋಜಿಸಿರುವ ಹಾಡುಗಳನ್ನು ಬಿಡುಗಡೆ ಮಾಡಿದರು.

ಈ ಚಿತ್ರದ ಮುಹೂರ್ತಕ್ಕೆ ಪುನೀತ್​ ಬರಬೇಕಿತ್ತಂತೆ. ಆದರೆ, ಅಷ್ಟರಲ್ಲಿ ಪುನೀತ್​ ಇಲ್ಲವಾದರು ಎಂದು ನೆನಪಿಸಿಕೊಳ್ಳುತ್ತಲೇ ಮಾತು ಪ್ರಾರಂಭಿಸಿದರು ರಾಘವೇಂದ್ರ ರಾಜಕುಮಾರ್​. 'ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ಬಳಿ ಚಿತ್ರ ಪ್ರಾರಂಭವಾಯಿತು. ಈಗ ಕಾಕತಾಳೀಯವಾಗಿ ಅಪ್ಪುವಿನ ಏಳನೇ ಪುಣ್ಯತಿಥಿಯಂದು ಇದೇ 29ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಸಿನಿಮಾ ಬಗ್ಗೆ ಹೆಚ್ಚು ಹೇಳುವುದೇನು ಇಲ್ಲ. ಪ್ರೇಕ್ಷಕರ ಹೇಳುತ್ತಾರೆ' ಎಂದರು ರಾಘವೇಂದ್ರ ರಾಜಕುಮಾರ್.

ಕಳೆದ 25 ವರ್ಷಗಳಿಂದ ಪೋಷಕ ಕಲಾವಿದೆಯಾಗಿ ಚಿತ್ರರಂಗದಲ್ಲಿರುವ ಪ್ರೀತಿ ಬಾಬು, ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. 'ರಾಘಣ್ಣ ಅವರೊಂದಿಗೆ ಮುಖ್ಯಪಾತ್ರದಲ್ಲೂ ನಟಿಸಿದ್ದೀನಿ. ಪಿ.ವಿ.ಆರ್ ಸ್ವಾಮಿ ಅವರ ಮೂಲಕ ರಾಘಣ್ಣ ಅವರ ಪರಿಚಯವಾಯಿತು. ಮೊದಲು ಅವರ ಬಳಿ ಕಥೆ ಹೇಳಲು ಭಯವಾಯಿತು. ನಂತರ ಅವರ ಮಾತಿನ ಶೈಲಿ ನೋಡಿ ಭಯವೆಲ್ಲಾ ದೂರವಾಯಿತು. ಅಂತಹ ಸರಳ ವ್ಯಕ್ತಿ ನಮ್ಮ ರಾಘಣ್ಣ. ದಾಂಪತ್ಯದ ಮಹತ್ವ ಸಾರುವ ಕಥೆ ಇದು. "ರಾಜಿ" ಅಂದರೆ ರಾ ಎಂದರೆ ರಾಘವೇಂದ್ರ ರಾಜಕುಮಾರ್, ಜಿ ಎಂದರೆ ಜೀವಿತ' ಎಂದು ಶೀರ್ಷಿಕೆಯ ವಿಶೇಷತೆಯನ್ನು ತಿಳಿಸಿದರು.

ಚಿತ್ರದಲ್ಲಿ ಏಳು ಹಾಡುಗಳಿದೆ, ಎಲ್ಲಾ ಹಾಡುಗಳನ್ನು ಡಾ.ಹೆಚ್.ಎಸ್. ವೆಂಕಟೇಶ್ ಮೂರ್ತಿ ಅವರೆ ಬರೆದಿದ್ದಾರೆ ಎಂದು ಸಂಗೀತ ಸಂಯೋಜಕ ಉಪಾಸನ ಮೋಹನ್ ತಿಳಿಸಿದರು.

ಈ ಸಂದರ್ಭದಲ್ಲಿ 'ರಾಜಿ' ಚಿತ್ರದ ನಿರ್ಮಾಪಕ ಮೈಸೂರಿನ ಬಸವರಾಜು, ವಿ.ನಾಗೇಂದ್ರ ಪ್ರಸಾದ್, ತಬಲಾ ನಾಣಿ, ಸಾಗರ್ ಪುರಾಣಿಕ್ ಮುಂತಾದವರಿದ್ದರು.